ಕಾವೇರಿ ನದಿ ದಡದಲ್ಲಿ ಜೇನುಹುಳು ದಾಳಿ: ಮೂರು ಮಂದಿ ವೃದ್ದರಿಗೆ ಗಂಭೀರ ಗಾಯ

ಹೊಸದಿಗಂತ ಶ್ರೀರಂಗಪಟ್ಟಣ :

ಕಾವೇರಿ ಸಂಗಮ ಬಳಿಯ ಕಾವೇರಿ ನದಿ ದಡದಲ್ಲಿ ಪ್ರವಾಸಿಗರು ಪೂಜೆ ಸಲ್ಲಿಸುವ ವೇಳೆ ಜೇನುಹುಳು ದಾಳಿ ನಡೆಸಿದ ಪರಿಣಾಮ ಮೂರು ಮಂದಿ ವೃದ್ದರು ಗಂಭೀರವಾಗಿದ್ದು ಸುಮಾರು 10 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಬೆಂಗಳೂರು ಮೂಲದ ಸುಮಾರು 15ಕ್ಕೂ ಹೆಚ್ಚು ಮಂದಿ ಟೆಂಪೋ ಟ್ರಾವೆಲರ್‌ನಲ್ಲಿ ಆಗಮಿಸಿ ಕಾವೇರಿ ನದಿ ತಟದಲ್ಲಿ ಪೂಜಾಕೈಂಕರ್ಯಕ್ಕೆ ಸಿದ್ದತೆ ಮಾಡಿಕೊಂಡು ಹೋಮ ಕುಂಡಕ್ಕೆ ಬೆಂಕಿ ಹಾಕಿದ ವೇಳೆ ಹೆಚ್ಚಿನ ಪ್ರಮಾಣದ ಹೊಗೆಯಿಂದಾಗಿ ಜೇನು ಹುಳುಗಳು ಜನರಿಗೆ ಕಚ್ಚಲು ಮುಂದಾಗಿವೆ. ಎಲ್ಲರೂ ಮುಸುಕು ಹಾಕಿ ಕೊಂಡು ಸಂಗಮದಲ್ಲಿ ದಿಕ್ಕಾ ಪಾಲಾಗಿ ಓಡಲಾರಂಭಿಸಿದರೂ ಬಿಡದ ಜೇನು ಹುಳುಗಳು ಸಿಕ್ಕ ಸಿಕ್ಕವರಿಗೆ ಕಚ್ಚಿ ಗಾಯಗೊಳಿಸಿವೆ.

ಕೆಲವರು ಜೇನುಹುಳುಗಳಿಂದ ರಕ್ಷಣೆಗಾಗಿ ಕಾವೇರಿ ನದಿಗಿಳಿದು ನೀರಲ್ಲಿ ಮುಳುಗಿ ಅವಿತುಕೊಂಡಿದ್ದಾರೆ. ಆದರೂ ಬಿಡದ ಜೇನುಹುಳು ದಾಳಿನಡೆಸುತ್ತಲೇ ಇರುವುದರಿಂದ ಪ್ರವಾಸಿಗರು ಸ್ಥಳದಿಂದ ಪರಾರಿಯಾಗಲು ಆಲೋಚಿಸಿ ಹುಳುಗಳಿಂದ ಕಚ್ಚಿಸಿಕೊಳ್ಳುತ್ತಲೇ ತಮ್ಮ ವಾಹನದ ಮೂಲಕ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬಂದು ಸೇರಿದ್ದಾರೆ.

ಜೇನುಹುಳುಗಳ ದಾಳಿಯಿಂದ ತಲೆ, ಕೈಕಾಲುಗಳು ಊದಿಸಿಕೊಂಡು ಬಂದ ರೋಗಿಗಳಿಗೆ ಆಸ್ಪತ್ರೆಯ ವೈದ್ಯಾದಿಕಾರಿ ಡಾ. ಮಾರುತಿ ನೇತೃತ್ವದಲ್ಲಿ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಎಲ್ಲರಿಗೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆತಿರುವುದರಿಂದ ಹೆಚ್ಚಿನ ಅನಾಹುತ ತಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!