ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ನಡೆದ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿ ದಂತೆ ಉಡುಪಿ ಜಿಲ್ಲೆ ಕಾಪು ತಾಲ್ಲೂಕು ಬಡಾಗ್ರಾಮ ಉಚ್ಚಿಲದ ಸುಭಾಷ್ ರಸ್ತೆಯ ಅಭಿಷೇಕ್ ಮತ್ತು ಎರ್ಮಾಳಿನ ತಬಸ್ಸುಂ ಬೇಗಂ ಎಂಬವರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಪಡುಬಿದ್ರಿ ಪೊಲೀಸರ ಸಹಾಯದಿಂದ ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.
ಖಾಸಗಿ ವಿಡಿಯೋ ಇದೆ ಎಂದಿದ್ದರು
ಆರೋಪಿಗಳು ಖಾಸಗಿ ವಿಡಿಯೋ ಇದೆ ಎಂದು ಬೆಂಗಳೂರಿನಲ್ಲಿ ಪ್ರೊಫೆಸರ್ ಒಬ್ಬರಿಗೆ ಬ್ಲಾಕ್ ಮೇಲ್ ಮಾಡಿ 2.5 ಕೋಟಿ ರೂ. ಹಣ ಪೀಕಿಸಿದ್ದರು. ಇವರ ಜೊತೆ ಬೆಂಗಳೂರಿನ ಅಜೀಮ್ ಮತ್ತು ಆನಂದ್ ಎಂಬ ಇಬ್ಬರನ್ನು ಕೂಡಾ ಬೆಂಗಳೂರಿನ ಸಿಸಿಬಿ ಪೊಲೀಸರು ಬಲೆಗೆ ಕೆಡವಿದ್ದಾರೆ.
ಜಿಮ್ ಗೆ ಬರ್ತಿದ್ದ ಪ್ರೊಫೆಸರ್ ಟಾರ್ಗೆಟ್
ಬೆಂಗಳೂರಿನ ಆರ್ ಟಿ ನಗರದ ಜಿಮ್‌ಗೆ ಬರುತ್ತಿದ್ದ 48 ವರ್ಷದ ಪ್ರೊಫೆಸರ್‌ರನ್ನು ಗಾಳಕ್ಕೆ ಹಾಕಿಕೊಂಡ ತಂಡ, ಅವರಿಗೆ ವಾಟ್ಸಾಪ್ ಮೂಲಕ ಅಶ್ಲೀಲ ಫೊಟೋ ಕಳುಹಿಸಿ, ಅವರಿಂದ 2021ರಿಂದ ಇದುವರೆಗೆ ನಿರಂತರವಾಗಿ ಈಗಾಗಲೇ 2.5 ಕೋಟಿ ರೂಪಾಯಿ ಹಣವನ್ನು ವಸೂಲಿ ಮಾಡಿದ್ದರು. ಇವರ ಕಿರುಕುಳ ತಡೆಯಲಾಗದೆ ಪ್ರೊಫೆಸರ್ ಬೆಂಗಳೂರು ಸಿಸಿಬಿಗೆ ದೂರು ನೀಡಿದ್ದರು. ಪ್ರೊಫೆಸರ್ ನೀಡಿದ ದೂರಿನನ್ವಯ ಈ ನಾಲ್ವರನ್ನು ಸಿಸಿಬಿ ಪೊಲೀಸರು ಇದೀಗ ಬಂಧಿಸಿದ್ದಾರೆ.