ಹೊಸದಿಗಂತ ವರದಿ ಅಂಕೋಲಾ:
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷೆಯ ಜಲ ಜೀವನ ಮಿಶನ್ ಕಾರ್ಯಕ್ರಮದ ಅಡಿಯಲ್ಲಿ ಅಂಕೋಲಾ ತಾಲೂಕಿನ 21 ಗ್ರಾಮ ಪಂಚಾಯಿತಿಗಳ ಪ್ರತಿ ಮನೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ರೂಪಿಸದಾಗುತ್ತಿದ್ದು ಹೊನ್ನಳ್ಳಿ ಕಿಂಡಿ ಅಣೆಕಟ್ಟು ಯೋಜನೆ ಕೇವಲ ನೌಕಾನೆಲೆಗೆ ನೀರು ಪೂರೈಸಲು ಮಾತ್ರ ಸೀಮಿತವಾಗಿರದೇ ಅಂಕೋಲಾ ತಾಲೂಕಿಗೆ ಕುಡಿಯುವ ನೀರು ಪೂರೈಕೆ ದೃಷ್ಟಿಯಿಂದ ಮಹತ್ವದ ಯೋಜನೆಯಾಗಲಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪ್ರಿಯಾಂಗಾ .ಎಂ ತಿಳಿಸಿದರು.
ಅಗಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ಳಳ್ಳಿಯಲ್ಲಿ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕಿಂಡಿ ಆಣೆಕಟ್ಟು ಯೋಜನೆಯಿಂದ ಅಂಕೋಲಾ ತಾಲೂಕಿನ 8 ಗ್ರಾಮ ಪಂಚಾಯಿತಿಗಳ 30 ಗ್ರಾಮಗಳಿಗೆ ಕುಡಿಯುವ ನೀರಿನ ಅಗತ್ಯತೆ ಪೂರೈಸಲಾಗುವುದು ಎಂದರು.
ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ತಾಂತ್ರಿಕವಾಗಿ ಪೂರಕ ಅಂಶಗಳನ್ನು ಪರಿಗಣಿಸಿ ಯೋಜನೆಗಳನ್ನು ರೂಪಿಸುವ ಅಗತ್ಯತೆ ಇದೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗಾಗಿ ಹತ್ತಿರದಲ್ಲಿ ಲಭ್ಯ ಇರುವ ನೀರಿನ ಮೂಲಗಳನ್ನು ಬಳಸಿಕೊಂಡು ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದ ಅವರು ಕೇಂದ್ರದಿಂದ ಪರಿಣಿತರ ತಂಡ ಆಗಮಿಸಿ ಸಂಪೂರ್ಣ ಅಧ್ಯಯನ ನಡೆಸಿ ಯಾವ ಮೂಲಗಳಿಂದ ಯಾವ ಭಾಗಗಳಿಗೆ ನೀರು ಪೂರೈಕೆ ಮಾಡಬಹುದು ಎಂದು ಸಲಹೆ ನೀಡಿದ ಮೇಲೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಅಗಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರ ನಾಯ್ಕ, ಪಂಚಾಯಿತಿ ಸದಸ್ಯರು, ಗ್ರಾಮಸ್ಥರು, ಅಧಿಕಾರಿಗಳು ಉಪಸ್ಥಿತರಿದ್ದರು.