ಕೃಷಿ ವಿವಿಯಿಂದ ಮಾಜಿ ಸಿಎಂ ಯಡಿಯೂರಪ್ಪರಿಗೆ ಗೌರವ ಡಾಕ್ಟರೇಟ್ ಘೋಷಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕ ವಿಶ್ವ ವಿದ್ಯಾನಿಲಯದಲ್ಲಿ
ಜು. 21ರಂದು ಜರಗಲಿರುವ 8ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ. ಜಗದೀಶ್ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾಡು‌ ಕಂಡ ಪ್ರಬುದ್ದ ರಾಜಕಾರಣಿ, ಹೋರಾಟಗಾರರು ಹಾಗೂ ನಮ್ಮ ಕೃಷಿ ವಿಶ್ವ ವಿದ್ಯಾಲಯ ಸ್ಥಾಪನೆಗೆ ಕಾರಣಿಕರ್ತರಾದ ಬಿ.ಎಸ್. ಯಡಿಯೂರಪ್ಪ ಅವರಿಗೆ ನಮ್ಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡುತ್ತಿರುವುದು ನಮಗೆಲ್ಲ ಸಂತೋಷವಾಗಿದೆ” ಎಂದರು.

ಕೃಷಿ ವಿವಿಯಿಂದ ಮೂವರ ಹೆಸರನ್ನು ನಾವು ರಾಜ್ಯಪಾಲರಿಗೆ ಸಲ್ಲಿಕೆ ಮಾಡಿದ್ದೆವು. ಇಂದು ರಾಜ್ಯಪಾಲರ ಕಚೇರಿಯಿಂದ ಬಿ.ಎಸ್. ಯಡಿಯೂರಪ್ಪಗೆ ಅವರ ಸೇವೆ ಗುರುತಿಸಿ ಗೌರವ ಡಾಕ್ಟರೇಟ್ ಪ್ರದಾನ ಮಾಡುವ ಸಂದೇಶ ಕಳುಹಿಸಿದ್ದಾರೆ. ನಾಳೆ ಘಟಿಕೋತ್ಸವ ಕಾರ್ಯಕ್ರಮ ಸಂಜೆ 4 ಗಂಟೆಗೆ ಸಾಗರ ತಾಲೂಕು ಇರುವಕ್ಕಿಯ ಕೃಷಿ ವಿವಿಯ ಆವರಣದಲ್ಲಿ ನಡೆಯಲಿದೆ. ಘಟಿಕೋತ್ಸವದಲ್ಲಿ ವಿಶ್ವ ವಿದ್ಯಾಲಯಗಳ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್, ಕೃಷಿ ಸಚಿವ ಚಲುವರಾಯಸ್ವಾಮಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ರಾಜ್ಯಸಭೆ ಸದಸ್ಯ ಡಾ.ವಿರೇಂದ್ರ ಹೆಗ್ಗಡೆ ಅವರು ಭಾಗವಹಿಸಲಿದ್ದಾರೆ. ಇದರಲ್ಲಿ ಘಟಿಕೋತ್ಸವದ ಭಾಷಣವನ್ನು ಡಾ.ವಿರೇಂದ್ರ ಹೆಗ್ಗಡೆ ಅವರು ಮಾಡಲಿದ್ದಾರೆ” ಎಂದು ಅವರು ತಿಳಿಸಿದರು.

ವಿವಿಯಿಂದ ಎರಡನೇ ಗೌರವ ಡಾಕ್ಟರೇಟ್: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕ‌ ವಿವಿಯಿಂದ ಈಗ ಎರಡನೇ ಭಾರಿ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ಕೋವಿಡ್ ವಾಕ್ಸಿನ್ ಕಂಡು ಹಿಡಿದ ಹೈದರಬಾದ್ ನ ಕೃಷ್ಣ ಯಲ್ಲಾ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿತ್ತು. ಈ ಬಾರಿ ಯಡಿಯೂರಪ್ಪ ಅವರು ರೈತರ ಪರವಾಗಿ ನಡೆಸಿದ ಹೋರಾಟ ಹಾಗೂ ಕೃಷಿ ಬಜೆಟ್ ಮಂಡನೆಗಾಗಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!