May 12, 2026
Tuesday, May 12, 2026
spot_img

ಚಿತ್ರದುರ್ಗದಲ್ಲಿ ಭೂಮಿ ಮುಂಜೂರು ಮಾಡುವಂತೆ ಒತ್ತಾಯಿಸಿ ಹೋರಾಟ ಸಮಿತಿಯಿಂದ ಆಹೋರಾತ್ರಿ ಧರಣಿ

ಹೊಸ ದಿಗಂತ ವರದಿ,ಚಿತ್ರದುರ್ಗ:

ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮುಂಜೂರು ಮಾಡುವಂತೆ ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಮಂಗಳವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಯಿತು. ಹೋರಾಟದಲ್ಲಿ ನೂರಾರು ಸಂಖ್ಯೆಯ ಬಗರ್ ಹುಕುಂ ಸಾಗುವಳಿದಾರರು ಸರ್ಕಾರ, ಜಿಲ್ಲಾಡಳಿತದ ವಿರುದ್ದ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಬಹುತೇಕ ಬಗರ್ ಹುಕುಂ ಸಾಗುವಳಿದಾರರ ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು, ತಿರಸ್ಕರಿಸುವ ಅರ್ಜಿಗಳನ್ನು ಪುನರ್ ಪರಿಶೀಲಿಸಬೇಕು. ಕಂದಾಯ, ಅರಣ್ಯ ಭೂಮಿಗಳ ಜಂಟಿ ಸರ್ವೆ ನಡೆಸುವ ಮೂಲಕ ಗೊಂದಲ ನಿವಾರಿಸಬೇಕು. ಸಾಗುವಳಿ ಚೀಟಿ ಹೊಂದಿರುವವರಿಗೆ ಸರ್ವೆ, ನಕ್ಷೆ ತಯಾರಿಸಿ ಪಹಣಿ ನೀಡಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.

ಫಾರಂ. ನಂ. 50, 53, ಹಾಗೂ 57 ರಲ್ಲಿ ಅರ್ಜಿ ಸಲ್ಲಿಸಿದ್ದು, ಸಾಗುವಳಿ ಮಾಡುತ್ತಿರುವ ಭೂರಹಿತರಿಗೆ ಒನ್ ಟೈಮ್ ಸೆಟಲ್ ಮೆಂಟ್ ಜಾರಿ ಮಾಡುವ ಮೂಲಕ ಭೂಮಿಗಳನ್ನು ಮಂಜೂರಾತಿ ನೀಡಬೇಕು. ಅರಣ್ಯ ಹಕ್ಕು ಕಾಯ್ದೆಯನ್ವಯ ಅರಣ್ಯ ಭೂಮಿಗಳಲ್ಲಿ ಸಾಗುವಳಿ ಮಾಡುವರಿಗೆ ಹಕ್ಕುಪತ್ರ ನೀಡಬೇಕು. ವಸತಿ ರಹಿತರಿಗೆ ನಿವೇಶನ, ಮನೆಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಹೋರಾಟದಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಕುಮಾರ್ ಸಮತಳ, ಪ್ರಜಾಶಕ್ತಿ ಬೋರಯ್ಯ, ರಾಜ್ಯ ಖಜಾಂಚಿ ಶ್ರೀರಂಗಾಚಾರಿ, ಜಿಲ್ಲಾ ಮುಖಂಡರಾದ ಸತ್ಯಪ್ಪ ಮಲ್ಲಾಪುರ, ಹನುಮಂತಪ್ಪ ಗೋನೂರು, ಕರಿಯಪ್ಪ ಈಚಘಟ್ಟ, ಬಚ್ಚಬೋರನಹಟ್ಟಿ ವೆಂಕಟೇಶ್, ಭೀಮಸಮುದ್ರ ಅಂಜನಪ್ಪ, ಮಾರಕ್ಕ, ಚಂದ್ರಣ್ಣ, ಹೀರಜ್ಜ, ಇನ್ನಿತರರು ಭಾಗವಹಿಸಿದ್ದರು.

ಇಂದಿನಿಂದ ಆರಂಭವಾಗಿರುವ ಧರಣಿಯು ಅನಿರ್ದಿಷ್ಟವಾಗಿ ಹಗಲು ರಾತ್ರಿ ಮುಂದುವರೆಯಲಿದೆ ಎಂದು ಹೋರಾಟಗಾರರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !