ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿ.ಸಿ. ರೋಡಿಗೆ ಸಮೀಪದ ರಸ್ತೆಯ ಬಂಟ್ವಾಳ ತಾಲೂಕಿನ ತಲಪಾಡಿಯಲ್ಲಿ ಶನಿವಾರ ಸಂಭವಿಸಿದ ಬೀಕರ ರಸ್ತೆ ಅಪಘಾತದಲ್ಲಿ ನವವಧುವೋರ್ವಳು ಸಾವನ್ನಪ್ಪಿದರೆ, ಆಕೆಯ ಪತಿ ಗಂಭೀರಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ನವ ದಂಪತಿಗಳು ಪ್ರಯಾಣಿಸುತ್ತಿದ್ದ ಕಾರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಪೆರ್ನೆ ಸಮೀಪದ ಒಡ್ಯದಗಯ ನಿವಾಸಿ ಅನಿಶ್ ಕೃಷ್ಣ ಅವರ ಪತ್ನಿ ಮಾನಸ ಮೃತಪಟ್ಟರೆ ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಅನಿಶ್ ಕೃಷ್ಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಸೆ.5 ರಂದು ದೇಂತಡ್ಕ ದೇವಸ್ಥಾನದಲ್ಲಿ ಇವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ನೂರಾರು ಕನಸುಗಳನ್ನು ಹೊತ್ತಿದ್ದರು. ಆದರೆ ಹಸೆಮಣೆಗೇರಿದ ಎರಡೇ ದಿನದಲ್ಲಿ ಮಾನಸ ವಿಧಿಯಲೀಲೆಗೆ ಬಲಿಯಾಗಿದ್ದಾಳೆ.
ಬಿ.ಸಿ. ರೋಡು ಕಡೆಯಿಂದ ಮಂಗಳೂರಿನತ್ತ ಪ್ರಯಾಣಿಸುತ್ತಿದ್ದ ನವದಂಪತಿಗಳ ಆಲ್ಟೋ ಕಾರು ನಿಯಂತ್ರಣ ಕಳೆದುಕೊಂಡು ತಾವು ಸಾಗುತ್ತಿದ್ದ ರಸ್ತೆ ಬಿಟ್ಟು ಡಿವೈಡರ್ ಮೇಲಿನಿಂದ ಇನ್ನೊಂದು ಬದಿಗೆ ಹಾರಿದ್ದು, ಈ ಸಂದರ್ಭ ಮಂಗಳೂರು ಕಡೆಯಿಂದ ಬಿ.ಸಿ.ರೋಡಿನತ್ತ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದಿದೆ.
ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನ ಎಡಭಾಗದಲ್ಲಿ ಕುಳಿತಿದ್ದ ಮಾನಸ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ದೇಂತಡ್ಕ ದೇವಸ್ಥಾನಕ್ಕೆ ಬಂದಿದ್ದ ದಂಪತಿ ವಾಪಸು ಮಾವನ ಮನೆಗೆ ತೆರಳುತ್ತಿದ್ದ ವೇಳೆ ಈ ರ್ದುಘಟನೆ ನಡೆದಿದೆಯೆನ್ನಲಾಗಿದೆ.
ಘಟನೆಯಿಂದಾಗಿ ಹೆದ್ದಾರಿಯಲ್ಲಿ ಕೆಲ ಹೊತ್ತು ಸಂಚಾರಕ್ಕೆ ಅಡಚಣೆ ಉಂಟಾಯಿತು. ಇವರಿಬ್ಬರು ಮಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.