October 9, 2026
Friday, October 9, 2026
spot_img

ಚೌತಿಯಂದು ಕುತ್ತಾರಿನಲ್ಲಿ ಭೀಕರ ಅಪಘಾತ: ಮೆದುಳು ನಿಷ್ಕ್ರಿಯ ಯುವಕನ ಅಂಗಾಂಗ ದಾನಕ್ಕೆ ಮನೆಮಂದಿ ನಿರ್ಧಾರ

ಹೊಸದಿಗಂತ ವರದಿ ಉಳ್ಳಾಲ:

ದಕ್ಷಿಣ ಕನ್ನಡ ಜಿಲ್ಲೆಯ ಕುತ್ತಾರು‌ ಕೊರಗಜ್ಜನ ಆದಿಕ್ಷೇತ್ರದ ಕಟ್ಟೆಯ ಬಳಿ ಸೋಮವಾರ ರಾತ್ರಿ ನಡೆದಿದ್ದ ಬೈಕ್ ಮತ್ತು ಸ್ಕೂಟರ್ ನಡುವಿನ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಯುವಕನ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಘೋಷಿಸಿದ್ದಾರೆ.

ವೈದ್ಯರ ಸಲಹೆಯಂತೆ ಪೋಷಕರು ಯುವಕನ ಅಂಗಾಂಗ ದಾನ ಪ್ರಕ್ರಿಯೆಗೆ ಮುಂದಾಗಿದ್ದಾರೆ.

ಕುತ್ತಾರುವಿನ ಆಯೆರೆ ಬೆಟ್ಟು ನಿವಾಸಿ ಗೋಪಾಲ ಹಾಗೂ ವೇದಾವತಿ ದಂಪತಿಯ ಕಿರಿಯ ಪುತ್ರ ವರ್ಷಿತ್ ಕುಲಾಲ್ (21) ಮೆದುಳು ನಿಷ್ಕ್ರಿಯಗೊಂಡ ಯುವಕನಾಗಿದ್ದಾನೆ.

ವರ್ಷಿತ್ ಸೋಮವಾರ ರಾತ್ರಿ 7.30 ರ ಹೊತ್ತಿಗೆ ಕುತ್ತಾರುವಿನಿಂದ ತನ್ನ ಮನೆಯ ಕಡೆ ತೆರಳುತ್ತಿದ್ದಾಗ ಕುತ್ತಾರು ಕೊರಗಜ್ಜನ ಆದಿ ಕ್ಷೇತ್ರದ ಬಳಿಯ ದುರ್ಗಾ ಆಟೋ ವರ್ಕ್ಸ್ ಶಾಪ್ ಮುಂಭಾಗದಲ್ಲಿ ರಾಣಿಪುರದಿಂದ ಕುತ್ತಾರು ಕಡೆಗೆ ಧಾವಿಸುತ್ತಿದ್ದ ಸ್ಕೂಟರ್ ಮುಖಾಮುಖಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಬೈಕಿಂದ ರಸ್ತೆಗೆಸೆಯಲ್ಪಟ್ಟು ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ವರ್ಷಿತನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇಂದು ಯೆನೆಪೋಯ ಆಸ್ಪತ್ರೆಯ ಮೂಲವು ವರ್ಷಿತ್ ನ ಮೆದುಳು ನಿಷ್ಕ್ರಿಯಗೊಂಡಿರುವುದನ್ನು ಖಚಿತಪಡಿಸಿದೆ.

ವೈದ್ಯರ ಸಲಹೆಯ ಮೇರೆಗೆ ವರ್ಷಿತ್ ಪೋಷಕರು ಮಗನ ಅಂಗಾಗ ದಾನ‌ ಪ್ರಕ್ರಿಯೆಯ ಮಹತ್ಕಾರ್ಯಕ್ಕೆ ಮುಂದಾಗಿದ್ದಾರೆ. ವರ್ಷಿತ್ ಕಿಡ್ನಿ, ಯಕೃತ್ತು, ಹೃದಯ, ಶಾಸಕೋಶಕ್ಕೆ ಈಗಾಗಲೇ ವಿವಿಧ ಆಸ್ಪತ್ರೆಗಳಿಂದ ಬೇಡಿಕೆ ಬಂದಿದ್ದು, ಇಂದೇ ಝೀರೋ ಟ್ರಾಫಿಕ್ ಮೂಲಕ ಅಂಗಾಗಗಳ ರವಾನೆ ಪ್ರಕ್ರಿಯೆ ನಡೆಸಲಾಗುತ್ತದೆಯೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಅಪಘಾತದಿಂದ‌ ಸ್ಕೂಟರ್ ಸವಾರ ಧೀರಜ್ ಕೂಡಾ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೆದುಳು ನಿಷ್ಕ್ರಿಯಗೊಂಡಿರುವ ವರ್ಷಿತ್ ಅವಿವಾಹಿತನಾಗಿದ್ದು, ಫ್ಯಾಬ್ರಿಕೇಷನ್ ಕೆಲಸ ನಿರ್ವಹಿಸುತ್ತಿದ್ದನೆನ್ನಲಾಗಿದೆ. ವರ್ಷಿತ್ ತಂದೆ, ತಾಯಿ ಹಾಗೂ ಏಕೈಕ ಸಹೋದರನನ್ನು ಅಗಲಿದ್ದಾನೆ.

ಮಂಗಳೂರು ದಕ್ಷಿಣ ಸಂಚಾರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Must Read