October 9, 2026
Friday, October 9, 2026
spot_img

ಎರಡು ಗಂಟೆ ಸುರಿದ ಮಳೆಯನ್ನೇ ತಡೆಯೋಕಾಗದ ಬೆಂಗಳೂರು: ರಸ್ತೆಗೆ ಬಿದ್ದ ಮರಗಳು, ಟ್ರಾಫಿಕ್‌ ಜಾಮ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಳೆದ ಎರಡು ತಿಂಗಳಿನಿಂದ ಮಳೆ ಬೀಳದೇ ಬಿಸಿಲಿಗೆ ಬೆಂದಿದ್ದ ಬೆಂಗಳೂರಿಗೆ ನಿನ್ನೆ ವರುಣ ಸರ್ಪ್ರೈಸ್‌ ವಿಸಿಟ್‌ ನೀಡಿದ್ದಾನೆ. ಎರಡು ಗಂಟೆಗಳ ಕಾಲ ಬಿಡದೇ ಸುರಿದ ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳ ಸ್ಥಿತಿ ಅದ್ವಾನವಾಗಿದೆ.

ನಿನ್ನೆ ಸುರಿದ ಮಳೆಯಿಂದಾಗಿ ರಸ್ತೆಗಳ ಮೇಲೆ ಮರಗಳು ಬಿದ್ದಿದ್ದು, ಅವುಗಳನ್ನು ತೆರವುಗೊಳಿಸುವವರೆಗೂ ಟ್ರಾಫಿಕ್‌ ಜಾಮ್‌ ಹಾಗೂ ನಿಧಾನಗತಿಯ ಓಡಾಟ ನಡೆಯಲಿದೆ. ಇನ್ನು ದೊಮ್ಮಲೂರಿನ ಆರ್ಮಿ ಕಾಂಪೌಂಡ್‌ ಗೋಡೆ ಕುಸಿದು ನಾಲ್ಕು ಹಸುಗಳು ಹಾಗೂ ಕರುವೊಂದು ಮೃತಪಟ್ಟಿವೆ. ಮಲ್ಲತಹಳ್ಳಿಯಲ್ಲಿ ಆಟೋ ಮೇಲೆ ಮರ ಬಿದ್ದಿದ್ದು, ಜಖಂ ಆಗಿದೆ.

ಕೋಡೆ ಅಂಡರ್‌ಪಾಸ್‌ ಬಳಿ ಮಳೆ ನೀರು ನಿಂತಿರುವುದರಿಂದ ಮೆಜೆಸ್ಟಿಕ್‌ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. ಕಂಠೀರವ ಸ್ಟೇಡಿಯಂ ಜಂಕ್ಷನ್ ಬಳಿ ಮರ ಬಿದ್ದ ಪರಿಣಾಮ ಸಿದ್ದಲಿಂಗಯ್ಯ ಜಂಕ್ಷನ್‌ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. ಅಗರದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ಕಡೆಗೆ , ಮಳೆ ನೀರು ನಿಂತಿರುವುದರಿಂದ ನಿಧಾನಗತಿಯಲ್ಲಿಸಂಚಾರವಿರುತ್ತದೆ. ಸಿಬಿ ರಸ್ತೆಯಲ್ಲಿ ಮರ ಬಿದ್ದ ಪರಿಣಾಮ ಇಎಸ್‌ಐ ಜಂಕ್ಷನ್‌ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಎಕ್ಸ್​ ಸಂದೇಶದಲ್ಲಿ ತಿಳಿಸಿದ್ದಾರೆ.

ಮೆಜೆಸ್ಟಿಕ್ ಮಾರ್ಕೆಟ್, ಜಯನಗರ, ಶಾಂತಿನಗರ, ರಾಜಾಜಿನಗರ, ವಿಜಯನಗರ, ರಿಚ್ಮಂಡ್ ಟೌನ್ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿದ್ದವು. ರಿಚ್ಮಂಡ್ ಟೌನ್ ಎದುರಿನ ರಸ್ತೆಯಲ್ಲಿ ನೀರು ನಿಂತು ವಾಹನಗಳು ಭಾಗಶಃ ಮುಳುಗಿವೆ.

Must Read