Monday, October 2, 2023

Latest Posts

CRIME| ಕಾಲೇಜು ಹಾಸ್ಟೆಲ್‌ನಲ್ಲಿ ದಾರುಣ ಘಟನೆ: ಯುವತಿಯ ಅತ್ಯಾಚಾರಗೈದು ಕೊಲೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸರ್ಕಾರಿ ವಸತಿ ನಿಲಯದಲ್ಲಿ 18 ವರ್ಷದ ಕಾಲೇಜು ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ಮುಂಬೈ ನಗರದಲ್ಲಿ ನಡೆದಿದೆ. ಮುಂಬೈ ಪೊಲೀಸರು ಹಾಸ್ಟೆಲ್ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆಯಾಗಿರುವುದಾಗಿ ಪ್ರಕರಣ ದಾಖಲಿಸಿದ್ದಾರೆ. ದಕ್ಷಿಣ ಮುಂಬೈನ ಪೊಲೀಸ್ ಜಿಮ್ಖಾನಾ ಬಳಿಯ ಸಾವಿತ್ರಿ ಫುಲೆ ಮಹಿಳಾ ಹಾಸ್ಟೆಲ್‌ನಲ್ಲಿ 15 ವರ್ಷಗಳಿಂದ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಓಂಪ್ರಕಾಶ್ ಕನೌಜಿಯಾ ತಲೆಮರೆಸಿಕೊಂಡಿದ್ದು, ನಂತರ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಾರ್ನಿ ರೋಡ್ ಸ್ಟೇಷನ್ ಹಿಂಬದಿಯಲ್ಲಿರುವ ಮರೀನ್ ಡ್ರೈವ್ ನಲ್ಲಿರುವ ಮಹಿಳಾ ಹಾಸ್ಟೆಲ್ ನ ನಾಲ್ಕನೇ ಮಹಡಿಯ ಕೊಠಡಿಯಲ್ಲಿ 18 ವರ್ಷದ ಯುವತಿಯ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಮುಂಬೈ ಡಿಸಿಪಿ ಪ್ರವೀಣ್ ಮುಂಡೆ ತಿಳಿಸಿದ್ದಾರೆ. ಮೃತ ಕಾಲೇಜು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವಷ್ಟೇ ಸ್ಪಷ್ಟ ಮಾಹಿತಿ ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆ ಬಾಂದ್ರಾ ಉಪನಗರದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್‌ನ ವಿದ್ಯಾರ್ಥಿನಿಯಾಗಿದ್ದು, ಪೊಲೀಸ್ ತಂಡ ಕೊಠಡಿ ಪ್ರವೇಶಿಸಿದಾಗ ಸಂತ್ರಸ್ತೆ ಕುತ್ತಿಗೆಗೆ ದುಪ್ಪಟ್ಟಾವನ್ನು ಬಿಗಿದಿರುವುದು ಕಂಡುಬಂದಿದೆ. ಘಟನೆಯಿಂದ ಹಾಸ್ಟೆಲ್‌ನಲ್ಲಿ ಕೆಲಸ ಮಾಡುವ ಗಾರ್ಡ್ ತಲೆಮರೆಸಿಕೊಂಡಿದ್ದಾನೆ. ಮಂಗಳವಾರ ಸಂಜೆ ಈ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಆಯುಕ್ತ ಅಭಿನವ್ ದೇಶಮುಖ್ ತಿಳಿಸಿದ್ದಾರೆ. ಸಂಜೆ 5:30ರ ಸುಮಾರಿಗೆ ಸಮೀಪದ ರೈಲು ನಿಲ್ದಾಣದಲ್ಲಿ ರೈಲಿಗೆ ಡಿಕ್ಕಿ ಹೊಡೆದು ಶಂಕಿತ ಪ್ರಕಾಶ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಟಿ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!