ಹೊಸದಿಗಂತ ವರದಿ ಗೋಕರ್ಣ:
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಸಮೀಪದ ದುಬ್ಬನಸಸಿ ಕಡಲತೀರದಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದ ಸಮುದ್ರ ದುರಂತದಲ್ಲಿ ಮೂವರು ಪ್ರವಾಸಿಗರು ಮೃತಪಟ್ಟ ಘಟನೆ ನಡೆದಿದೆ. ಘಟನೆಯಲ್ಲಿ ಕಣ್ಮರೆಯಾಗಿರುವ ಮತ್ತೊಬ್ಬ ವ್ಯಕ್ತಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಮೃತರನ್ನು ಜಾರ್ಖಂಡ್ ಮೂಲದ ಶೋಭಾ ದಾಸ್ (22), ಬೆಂಗಳೂರಿನ ಮಹಮ್ಮದ್ ಅಕ್ರಂ (27) ಮತ್ತು ವಿಶ್ವೇಶ್ (24) ಎಂದು ಗುರುತಿಸಲಾಗಿದೆ. ವಿಶ್ವೇಶ್ ಅವರ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಗೋಕರ್ಣ ಪೊಲೀಸರು ಹಾಗೂ ಸ್ಥಳೀಯರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಸಮುದ್ರಕ್ಕೆ ಇಳಿದಿದ್ದ ಉದ್ಯೋಗಿಗಳ ತಂಡ
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 16 ಉದ್ಯೋಗಿಗಳ ತಂಡ ಗೋಕರ್ಣ ಪ್ರವಾಸಕ್ಕೆ ಬಂದಿತ್ತು. ದುಬ್ಬನಸಸಿ ಕಡಲತೀರದ ಸಮೀಪದ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದ ತಂಡದ ಕೆಲವರು ಭಾನುವಾರ ಬೆಳಗಿನ ಜಾವ ಸಮುದ್ರಕ್ಕೆ ಇಳಿದು ಆಟವಾಡುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಏಕಾಏಕಿ ಅಬ್ಬರಿಸಿದ ಭಾರೀ ಅಲೆಗಳು ಪ್ರವಾಸಿಗರನ್ನು ಸಮುದ್ರದೊಳಗೆ ಎಳೆದೊಯ್ದಿವೆ. ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ನಾಲ್ವರನ್ನು ಸ್ಥಳೀಯರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮೂವರು ಮೃತಪಟ್ಟಿದ್ದು, ಮತ್ತೊಬ್ಬ ವ್ಯಕ್ತಿ ಕಣ್ಮರೆಯಾಗಿದ್ದಾರೆ.



