ಹೊಸದಿಗಂತ ವರದಿ ಶಿರಸಿ :
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ನೀಡಲಾಗುತ್ತಿರುವ ಶ್ಯಾಮರಾವ ದತ್ತಿನಿಧಿ ಪ್ರಶಸ್ತಿ ಪುರಸ್ಕೃತರಾದ ಸಿದ್ದಾಪುರದ ‘ಹೊಸ ದಿಗಂತ’ವರದಿಗಾರ ಕೆಕ್ಕಾರ ನಾಗರಾಜ ಭಟ್ಟ ಮತ್ತು ಅಜ್ಜಿಬಳ ಪ್ರಶಸ್ತಿ ಪುರಸ್ಕೃತ ಯಲ್ಲಾಪುರ ‘ಹೊಸ ದಿಗಂತ’ ವರದಿಗಾರ್ತಿ ಪ್ರಭಾವತಿ ಜಯರಾಜ ಗೋವಿ ಅವರನ್ನು ಹೊಸದಿಗಂತ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಇಲ್ಲಿಯ ನೆಮ್ಮದಿ ಕುಟೀರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪತ್ರಿಕೆಯ ಹುಬ್ಬಳ್ಳಿ ಆವೃತ್ತಿ ಮುಖ್ಯಸ್ಥ ವಿಠ್ಠಲದಾಸ ಕಾಮತ್, ಜಾಹಿರಾತು ಮ್ಯಾನೆಜರ್ ಸತೀಶ ಮುತಗಿ ಅವರು ಸನ್ಮಾನ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಠ್ಠಲದಾಸ ಕಾಮತ್ , ಜಿಲ್ಲೆಯ ಪ್ರತಿಷ್ಠಿತ ಈ ಎರಡು ಪ್ರಶಸ್ತಿಯನ್ನು ಪಡೆಯುವ ಮೂಲಕ ನಮ್ಮ ಇಬ್ಬರು ವರದಿಗಾರರು ಪತ್ರಿಕೆಯ ಗೌರವವನ್ನು ಹೆಚ್ಚಿಸಿದ್ದಾರೆ ಎಂದರು.
ಶಿರಸಿ ವರದಿಗಾರ ಪ್ರವೀಣ ಹೆಗಡೆ ಸ್ವಾಗತಿಸಿದರು. ಪ್ರಸರಣ ಪ್ರತಿನಿಧಿ ಜಿತೇಂದ್ರ ಭಟ್ಟ ವಂದಿಸಿದರು.
ವರದಿಗಾರರಾದ ಸತೀಶ ತಾಂಡೇಲ್, ಸಂತೋಷ ರಾಯ್ಕರ, ಸುಧೀರ ನಾಯರ್, ಗಣೇಶ ಜೋಶಿ, ಜಯರಾಜ ಗೋವಿ ಇದ್ದರು.