ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಗ್ರಾಮಾಂತರದ ಹೊಸಕೋಟೆಯ ದೇವಸ್ಥಾನವೊಂದರಲ್ಲಿ ಪ್ರಸಾದ ಸೇವಿಸಿ ಅಸ್ವಸ್ಥರಾದವರ ಸಂಖ್ಯೆ 217ಕ್ಕೆ ಏರಿಕೆಯಾಗಿದೆ.
ಕಲುಷಿತ ಆಹಾರ ಸೇವಿಸಿ ಮೊದಲ ದಿನವೇ 135 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರಲ್ಲಿ 35 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ.
ಹೊಸಕೋಟೆಯ ಎರಡು ದೇಗುಲಗಳಲ್ಲಿ ಪ್ರಸಾದ ಸೇವಿಸಿದವರಲ್ಲಿ ಅಸ್ವಸ್ಥತೆ ಕಾಣಿಸಿಕೊಂಡಿದೆ. ವಾಂತಿ ಹಾಗೂ ಬೇಧಿಯಿಂದ ಜನರು ನಿತ್ರಾಣರಾಗಿದ್ದಾರೆ. ಪ್ರಸಾದವೇ ಇದಕ್ಕೆಲ್ಲಾ ಕಾರಣ ಎನ್ನುವ ಬಗ್ಗೆ ತನಿಖೆ ನಡೆದಿಲ್ಲ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು 80 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿರುವವರು ಎನ್ನಲಾಗಿದೆ.
ಆಹಾರ ಮಾದರಿ ಹಾಗೂ ರಕ್ತದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ನಿಖರ ಕಾರಣ ತಿಳಿಯಲು ವರದಿ ಬರುವವರೆಗೂ ಕಾಯಬೇಕಿದೆ ಎಂದು ವೈದ್ಯರು ಹೇಳಿದ್ದಾರೆ.