ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರ ಕೋರಿರುವ ಸುಮಾರು 2.81 ಲಕ್ಷ ಕೋಟಿ ರೂಪಾಯಿಗಳ ಪೂರಕ ವೆಚ್ಚಕ್ಕೆ, ಸದನದ ಅನುಮೋದನೆ ಕೋರಿದ್ದು, ಅದಕ್ಕೆ ಇಂದು ಲೋಕಸಭೆ ಅನುಮೋದನೆ ನೀಡಿದೆ.
ರಸಗೊಬ್ಬರ ಸಬ್ಸಿಡಿ, ರಕ್ಷಣಾ ಇಲಾಖೆಯ ಸ್ಪೆಕ್ಟ್ರಮ್ ಶುಲ್ಕಗಳು ಮತ್ತು ಆರ್ಥಿಕ ಸ್ಥಿರೀಕರಣ ನಿಧಿಗೆ ಹೆಚ್ಚಿನ ಅನುದಾನವನ್ನು ಮೀಸಲಿಡುವ ಬಗ್ಗೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅನುಮೋದನೆಯನ್ನು ಕೋರಿದ್ದರು. ಇದಕ್ಕೂ ಮುನ್ನ ಮಾತನಾಡಿದ ಸಚಿವೆ, ಅನುದಾನಗಳ ಪೂರಕ ಬೇಡಿಕೆಗಳ ಬಗ್ಗೆ ಮಾಹಿತಿ ನೀಡಿದರು. ಇದರಲ್ಲಿ, 1 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಸ್ಥಿರೀಕರಣ ನಿಧಿಯನ್ನು ಸ್ಥಾಪಿಸುವ, ಅನುದಾನ ವೆಚ್ಚ, ರಸಗೊಬ್ಬರ ಸಬ್ಸಿಡಿಗಾಗಿ 19 ಸಾವಿರದ 230 ಕೋಟಿ ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ , ಸಬ್ಸಿಡಿಗಳಿಗಾಗಿ 23 ಸಾವಿರದ 641 ಕೋಟಿ , ಹೆಚ್ಚುವರಿ ವೆಚ್ಚ ಸೇರಿರುವುದಾಗಿ ಸಚಿವೆ ಮಾಹಿತಿ ನೀಡಿದರು.
ಇತರ ಪ್ರಮುಖ ವೆಚ್ಚಗಳಲ್ಲಿ ರಕ್ಷಣಾ ಸಚಿವಾಲಯಕ್ಕೆ 41 ಸಾವಿರದ 822 ಕೋಟಿ ಸೇರಿರುವುದಾಗಿ ಹೇಳಿದರು. 2026-27ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ , ಹೊಸ ಗ್ರಾಮೀಣ ಉದ್ಯೋಗ ಯೋಜನೆ ‘ವಿಕಸಿತ ಭಾರತ – ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಗ್ರಾಮೀಣ’ ವಿಬಿ– ಜಿ ರಾಮ್ ಜಿಗೆ , 95 ಸಾವಿರ ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಅನುದಾನಕ್ಕಾಗಿ ಪೂರಕ ಬೇಡಿಕೆಗಳ ಅಡಿಯಲ್ಲಿ, ಹೆಚ್ಚುವರಿಯಾಗಿ 30 ಸಾವಿರ ಕೋಟಿ ರೂಪಾಗಳನ್ನು ಹಂಚಿಕೆ ಮಾಡಲಾಗಿದೆ. ಯೋಜನೆಯು ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ರಕ್ಷಣಾ ಇಲಾಖೆಯ ಬಲವರ್ಧನೆಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ಯೋಧರಿಗೆ ನೆರವಾಗುವ ನಿಟ್ಟಿನಲ್ಲಿ ಹೆಚ್ಚುವರಿ ಅನುದಾನವನ್ನು ನೀಡಲಾಗಿದೆ. 6 ಸಾವಿರದ 144 ಕೋಟಿ ರೂಪಾಯಿಗಳನ್ನು ಮೀಸಲು ಇರಿಸಲಾಗಿದೆ. ಇಷ್ಟೇ ಅಲ್ಲದೇ, ಮಾಜಿ ಸೈನಿಕರು ಆರೋಗ್ಯ ಸೇವೆಗಳಲ್ಲಿ ಕೊರತೆ ಎದುರಿಸಬಾರದು ಎಂದು ಖಚಿತಪಡಿಸಿಕೊಳ್ಳಲು ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆಗೆ ಆರು ಸಾವಿರದ 140 ಕೋಟಿ ರೂಪಾಯಿಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.



