October 10, 2026
Saturday, October 10, 2026
spot_img

ನಾಳಿನ ಒಳ್ಳೆಯ ಸಿನಿಮಾವನ್ನು ಕೊಲ್ಲಬೇಡಿ: ಪೈರಸಿ ವಿರುದ್ಧ ನಟ ರಿಷಬ್ ಶೆಟ್ಟಿ ಆಕ್ರೋಶ!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ದಳಪತಿ ವಿಜಯ್ ನಟನೆಯ ಜನ ನಾಯಗನ್ ಸಿನಿಮಾ ಪೈರಸಿ ಕಾಟಕ್ಕೆ ಬಲಿಯಾಗಿದ್ದು, ಬಿಡುಗಡೆಗೂ ಮುನ್ನವೇ ಇಂಟರ್ನೆಟ್‌ನಲ್ಲಿ ಸಿನಿಮಾ ಸೋರಿಕೆಯಾಗಿದೆ.

ಇದರ ಬೆನ್ನಲ್ಲೇ ಈ ಘಟನೆ ವಿರುದ್ಧ ಚಿತ್ರರಂಗದ ಅನೇಕರು ಕಿಡಿಕಾರಿದ್ದು, ಇದೀಗ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕೂಡ ಈ ರೀತಿ ಸಿನಿಮಾ ತಂಡದ ಶ್ರಮವನ್ನು ಹಾಳು ಮಾಡುವುದು ತಪ್ಪು ಎಂದು ಆಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ರಿಷಬ್ ಶೆಟ್ಟಿ, ಸಿನಿಮಾ ಎಂಬುದು ಕೇವಲ ಬಣ್ಣದ ಲೋಕವಲ್ಲದೆ, ಅದೆಷ್ಟೋ ಜನರ ಪ್ಯಾಶನ್, ಕನಸು ಮತ್ತು ಪ್ರೀತಿಯ ಮೇಲೆ ನಿರ್ಮಾಣವಾಗಿರುತ್ತದೆ. ಸಾವಿರಾರು ಜನರು ಹಗಲು ರಾತ್ರಿ ಶ್ರಮಿಸಿ ಪ್ರೇಕ್ಷಕರಿಗೆ ಉತ್ತಮ ಮನರಂಜನೆ ನೀಡಲು ಪ್ರಯತ್ನಿಸುತ್ತಾರೆ. ಆದರೆ ಎಷ್ಟೆಲ್ಲ ನಡೆದಾಗ ಈ ರೀತಿ ಪೈರಸಿ ಕಾಟ ಆ ಸಿನಿಮಾದ ಹಿಂದೆ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ನೋವುಂಟು ಮಾಡುತ್ತದೆ ಎಂದು ಹೇಳಿದರು.

ಇಂದು ಜನ ನಾಯಕನ್ ವಿಡಿಯೋ ಸೋರಿಕೆಯಾಗಿರುವುದು ಗಂಭೀರವಾದ ವಿಷಯ. ದಯವಿಟ್ಟು ಅಭಿಮಾನಿಗಳು ಇಂತಹ ಸೋರಿಕೆಯಾದ ತುಣುಕುಗಳನ್ನು ಹಂಚಬೇಡಿ. ನಾಳಿನ ಒಳ್ಳೆಯ ಸಿನಿಮಾದ ಶಕ್ತಿಯನ್ನು ಕೊಲ್ಲಬೇಡಿ. ನಮ್ಮ ಸಿನಿಮಾ ಕುಟುಂಬವನ್ನು ನಾವೇ ರಕ್ಷಿಸೋಣ. ಪೈರಸಿಯನ್ನು ಕೊಲ್ಲೋಣ ಎಂದು ಕರೆ ನೀಡಿದ್ದಾರೆ.

ಇತ್ತ ರಜನಿಕಾಂತ್, ಕಮಲ್ ಹಾಸನ್, ಸೂರ್ಯ ಮತ್ತು ಚಿರಂಜೀವಿ ಅವರಂತಹ ದಿಗ್ಗಜ ನಟರು ಕೂಡ ಚಿತ್ರತಂಡಕ್ಕೆ ಬೆಂಬಲ ಸೂಚಿಸಿದ್ದು, ಪೈರಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Must Read