ಕೊಡಗು ಜಿಲ್ಲೆಯಲ್ಲಿ ವಸತಿ ಯೋಜನೆ ಕುಂಠಿತ: ಸಚಿವ ಸೋಮಣ್ಣ

ಹೊಸದಿಗಂತ ವರದಿ,ಮಡಿಕೇರಿ:

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ವಿವಿಧ ವಸತಿ ಯೋಜನೆಗಳಡಿ ಮಂಜೂರಾಗಿರುವ 2852 ಮನೆಗಳ ಪೈಕಿ ಇದುವರೆಗೆ ಕೇವಲ 81 ಮಾತ್ರ ಪೂರ್ಣಗೊಂಡಿವೆ.ಉಳಿದ 1008 ಮನೆಗಳು ಇನ್ನೂ ಆರಂಭವಾಗಬೇಕಿದೆ ಎಂದು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ವಿಧಾನ ಮಂಡಲದ ಅಧಿವೇಶನದಲ್ಲಿ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಬಸವ ವಸತಿ ಯೋಜನೆಯಡಿ 1846 ಮನೆಗಳು ಮಂಜೂರಾಗಿದ್ದು, ಇದರಲ್ಲಿ 48 ಮನೆಗಳು ಪೂರ್ಣಗೊಂಡಿವೆ. 777 ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ. 1008 ಮನೆಗಳ ನಿರ್ಮಾಣ ಇನ್ನೂ ಆರಂಭವಾಗಬೇಕಿದ್ದು, 13 ಮನೆಗಳ ನಿರ್ಮಾಣವನ್ನು ತಡೆಹಿಡಿಯಲಾಗಿದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ (ಗ್ರಾಮೀಣ) ಮಂಜೂರಾದ 654 ಮನೆಗಳಲ್ಲಿ 8 ಮನೆಗಳಷ್ಟೇ ಪೂರ್ಣವಾಗಿದ್ದು, 173 ವಿವಿಧ ಹಂತಗಳಲ್ಲಿವೆ. 7 ಮನೆಗಳನ್ನು ತಡೆಹಿಡಿಯಲಾಗಿದೆ. ದೇವರಾಜ ಅರಸು ಯೋಜನೆಯಡಿ (ಗ್ರಾಮೀಣ) 5 ಮನೆಗಳು ಮಂಜೂರಾಗಿದ್ದು, 1 ಮನೆ ಪೂರ್ಣವಾಗಿದೆ. 4 ಮನೆಗಳ ನಿರ್ಮಾಣ ಪ್ರಾರಂಭವಾಗಬೇಕಿದೆ ಎಂದು ಸಚಿವರು ವಿವರಿಸಿದ್ದಾರೆ.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ (ಗ್ರಾಮೀಣ) 2 ಮನೆ ಮಂಜೂರಾಗಿದ್ದು, 1 ಮನೆ ಪೂರ್ಣವಾಗಿದ್ದರೆ ಮತ್ತೊಂದು ಮನೆ ಪ್ರಗತಿಯಲ್ಲಿದೆ. ಗ್ರಾಮೀಣ ಭಾಗದಲ್ಲಿ ಒಟ್ಟು ಮಂಜೂರಾದ 2507 ಮನೆಗಳಲ್ಲಿ 58 ಮನೆಗಳು ಪೂರ್ಣವಾಗಿದ್ದರೆ, 951 ಪ್ರಗತಿಯಲ್ಲಿವೆ. 1478 ಮನೆಗಳ ನಿರ್ಮಾಣ ಇನ್ನಷ್ಟೇ ಪ್ರಾರಂಭವಾಗಬೇಕಿದೆ.
ವಾಜಪೇಯಿ ನಗರ ವಸತಿ ಯೋಜನೆಯಡಿ 143 ಮನೆಗಳು ಮಂಜೂರಾಗಿದ್ದು, ಯಾವುದೇ ಮನೆಗಳು ಪೂರ್ಣವಾಗಿಲ್ಲ. 19 ಮನೆಗಳು ಪ್ರಗತಿಯಲ್ಲಿವೆ. 124 ಮನೆಗಳ ನಿರ್ಮಾಣ ಇನ್ನಷ್ಟೇ ಆಗಬೇಕಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ (ನಗರ) ಯೋಜನೆಯಲ್ಲಿ ಮಂಜೂರಾದ 52 ಮನೆಗಳಲ್ಲಿ ಯಾವುದೂ ಪೂರ್ಣವಾಗಿಲ್ಲ. 8 ಮನೆಗಳಷ್ಟೇ ವಿವಿಧ ಹಂತಗಳಲ್ಲಿದ್ದು, 44 ಮನೆಗಳ ನಿರ್ಮಾಣವಾಗಬೇಕಾಗಿದೆ. ಪ್ರಧಾನ ಮಂತ್ರಿ ಆವಾಸ್ (ನಗರ) ಯೋಜನೆಯಡಿ 150 ಮನೆಗಳು ಮಂಜೂರಾಗಿದ್ದರೆ, 23 ಪೂರ್ಣವಾಗಿದೆ. 30 ಮನೆಗಳು ವಿವಿಧ ಹಂತಗಳಲ್ಲಿದ್ದು, 97 ಆರಂಭವಾಗಬೇಕಾಗಿದೆ. ಒಟ್ಟಾಗಿ ನಗರ ಪ್ರದೇಶಕ್ಕೆ ಮಂಜೂರಾದ 345 ಮನೆಗಳಲ್ಲಿ 23 ಪೂರ್ಣವಾಗಿದ್ದರೆ, 57 ವಿವಿಧ ಹಂತಗಳಲ್ಲಿದ್ದು, 265 ಮನೆಗಳ ನಿರ್ಮಾಣ ಇನ್ನಷ್ಟೇ ನಡೆಯಬೇಕಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!