ಮೇಘನಾ ಶೆಟ್ಟಿ ಶಿವಮೊಗ್ಗ
ಅವಳ ಬಳೆ ನೋಡು ಕೇಸರಿ ಬಿಳಿ ಹಸಿರು, ನಮ್ಮನೆ ಹತ್ರಿರೋ ಗಣೇಶ್ ಅಂಗ್ಡಿಲಿ ಇಂಥದ್ ಸಿಗ್ಲೇ ಇಲ್ಲ..
ಅವ್ನ್ ನೋಡು ಮನೆಲಿ ಬಿಟ್ಟಿರೋ ದೊಡ್ ಡೇರೆ ಹೂವ ತಗೊಂಡ್‌ಬಂದಿದಾನೆ ಗಾಂಧೀಜಿ ಫೋಟೊಗೆ ಇಡಕ್ಕೆ..
ಈ ದಿನಕ್ಕೆ ವರ್ಷವಿಡೀ ಕಾಯ್ಬೇಕಾಗಿತ್ತು. ಸ್ವಾತಂತ್ರ್ಯ ದಿನಾಚರಣೆ ಅಂದ್ರೆ ಹಾಡು, ಡ್ಯಾನ್ಸು, ಭಾಷಣ, ಸ್ವೀಟು ಎಲ್ಲಕ್ಕಿಂತ ಖುಷಿ ಅರ್ಧ ದಿನ ರಜೆ, ಸ್ಟೇಡಿಯಂನಲ್ಲಿ ಡ್ಯಾನ್ಸ್, ಫ್ರೆಂಡ್ಸ್ ಜೊತೆ ಹರಟೆ..
ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ, ನೆಹರು.. ಹೀಗೆ ಭಾಷಣ ಆರಂಭಮಾಡಿದ್ದು ನೆನಪಿದ್ಯಾ? ತಿಂಗಳಿನಿಂದ ಈ ದಿನಕ್ಕೆ ಡ್ಯಾನ್ಸ್ ಮಾಡೋದಕ್ಕೆ ಮಾಡಿದ ಪ್ರಾಕ್ಟೀಸ್ ಎಷ್ಟೊಂದು ಅಲ್ವಾ? ದೇಸ್ ರಂಗೀಲಾ, ಝಮೀನ್ ಝಮೀನ್, ಲಗಾನ್ ಹಾಡುಗಳಿಗೆ ಡ್ಯಾನ್ಸ್ ಮಾಡಿದ್ದು, ದೇಶಭಕ್ತಿಗೀತೆಗಳನ್ನು ಗುಂಪಿನಲ್ಲಿ ನಿಂತು ಹಾಡಿದ ನೆನಪು ಈಗಲೂ ಹಾಗೇ ನೆನಪಿದೆ.
ಇನ್ನು ಬಿಸಿಲಿನಲ್ಲಿ ಲೈನ್ ಮಾಡಿ ಕೂತ ನಮ್ಮಲ್ಲಿ ಒಬ್ಬರಿಬ್ಬರಾದ್ರೂ ತಲೆ ತಿರುಗಿ ಬಿದ್ದು, ನೆರಳಿನಲ್ಲಿ ಕೂರ್ತಿದ್ರು. ಅವರ ʼಸಪೋರ್ಟ್ʼಗೋಸ್ಕರ ಇನ್ನೊಬ್ರು ಜೊತೆಯಲ್ಲಿ ಹೋಗಿ ಕೂತು ʼಉಸ್ಸಪ್ಪಾ ಬಿಸ್ಲು ತಪ್ತುʼ ಅಂತ ಖುಷಿಪಟ್ಟಿದ್ದೂ ಇದೆ.
ಕಾರ್ಯಕ್ರಮದಲ್ಲಿ ನಮ್ಮ ಮಕ್ಕಳು ಹೇಗೆ ಪರ್ಫಾರ್ಮ್ ಮಾಡ್ತಾರೆ ಅಂತ ಕಾದು ನಿಲ್ಲೋ ಕ್ಲಾಸ್ ಟೀಚರ್ಸ್, ಈಗ ನಾಲ್ಕನೇ ತರಗತಿ ಸಂತೋಷ್‌ನಿಂದ ದೇಶಭಕ್ತಿಗೀತೆ ಎನ್ನುವ ಆಂಕರ್ಸ್. ಆಗೆಲ್ಲಾ ಇದು ದೊಡ್ಡ ವಿಷಯ ಅಲ್ಲ, ಬಟ್ ಈಗ ನೆನಪು ಮಾಡಿಕೊಂಡ್ರೆ ಎಷ್ಟು ಈಸಿ ದಿನಗಳು ಅನಿಸುತ್ತವೆ ಅಲ್ವಾ?
ಈ ದಿನದಂದು ಸ್ವಾತಂತ್ರ್ಯ ಹೇಗೆ ಬಂತು, ಅದ್ಕೆ ಏನೆಲ್ಲಾ ಕಷ್ಟಪಡಬೇಕಾಯ್ತು ಅಂತ ಪುಟ್ಟ ಮಕ್ಕಳ ಬಾಯಲ್ಲಿ ಕೇಳಿ ತಿಳ್ಕೊಂಡಿದ್ದಾಯ್ತು. ಇನ್ನು ಮಕ್ಕಳನ್ನು ನೋಡೋದೆ ಒಂದು ಖುಷಿ. ಪುಟಾಣಿ ಬಿಳಿ ಚಡ್ಡಿ, ಅದಕ್ಕೆ ಬಿಳಿ ಶೂಗಳು, ಬಿಳಿ ಶರ್ಟ್ ಮೇಲೆ ಅಲ್ಲಲ್ಲಿ ಉಜಾಲಾ ನೀಲಿ ಕಲೆ, ಎಣ್ಣೆ ಹಚ್ಚಿ ನೀಟಾಗಿ ಕ್ರಾಪು ತೆಗೆದ ತಲೆ, ಪೌಡರ್ ಹಾಕಿದ ಮುದ್ದಾದ ಮುಖ. ಇನ್ನು ಹುಡುಗಿಯರನ್ನು ನೋಡೋಕೆ ಎರಡು ಕಣ್ಣು ಸಾಲೋದಿಲ್ಲ. ಸಾಕ್ಸ್ ಶೂ ಮೇಲೆ ಪುಟಾಣಿ ಗೆಜ್ಜೆ ಝಲ್ ಎನ್ನುವಂತೆ ಓಡಿ ಬರುವಾಗ ಕೈಯಲ್ಲಿದ್ದ ಕೇಸರಿ ಬಿಳಿ ಹಸಿರು ಬಳೆಗಳ ಸದ್ದು ಕಿವಿಗೆ ಇಂಪು. ಬಿಳಿ ಯುನಿಫಾರ್ಮ್ ಮೇಲೆ ಬಾವುಟದ ಪಿನ್ ಸ್ಟಿಕರ್, ಕೈಯಲ್ಲಿ ಬ್ಯಾಂಡ್, ಹಣೆಗೆ ಕೇಸರಿ ಬಿಳಿ ಹಸಿರು ಬೊಟ್ಟು, ಕೇಸರಿ ಟೇಪು…
ಇನ್ನು ಎಲ್ಲ ಮಕ್ಕಳು ಒಂದೂವರೆ ಗಂಟೆ ಶಾಂತವಾಗಿ ಕೂತಿದ್ದು ಯಾಕೆ ಹೇಳಿ, ಅಕ್ಕಪಕ್ಕದ ಕ್ಯೂನಲ್ಲಿರುವ ಸ್ನೇಹಿತರಿಗೆ ಪುಟಾಣಿ ಕಲ್ಲುಗಳನ್ನು ಎಸೆಯೋದು, ಬಿಸಿಲಿಗೆ ಕೈ ಅಡ್ಡ ಕಟ್ಟಿ ಕೂರೋದು, ಇಷ್ಟೆಲ್ಲಾ ಕಿತಮೆ ಮಾಡಿದ್ರೂ ಕಡೆವರೆಗೂ ಕೂತಲ್ಲೇ ಕೂತಿದ್ದು ಒಂದೇ ಒಂದು ಪುಟಾಣಿ ಸೋಂಪಾಪುಡಿ ಅಥವಾ ಕಡ್ಲೆಮಿಠಾಯಿಗೆ ತುಂಬಾ ಶ್ರೀಮಂತ ಸ್ಕೂಲ್ ಆಗಿದ್ರೆ ಚಾಕೋಲೆಟ್‌ಗೆ..
ಹೇಳಿ ನಿಮ್ಮ ಬಾಲ್ಯದ ಸ್ವಾತಂತ್ರ್ಯೋತ್ಸವದ ನೆನಪುಗಳು ಮತ್ತೆ ಬಂತಾ?