ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನರಲ್ ಬಿಪಿನ್ ರಾವತ್, ಅವರ ಪತ್ನಿ ಸಹಿತ 13 ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ವಾಯುಪಡೆಯ ಎಂಐ-17ವಿ5 ಹೆಲಿಕಾಪ್ಟರ್ ಪತನದ ತನಿಖಾ ವರದಿ ಸಲ್ಲಿಕೆಯಾಗಿದ್ದು, ಹೆಲಿಕಾಪ್ಟರ್ ಪತನಕ್ಕೆ ದಿಢೀರ್ ಹವಾಮಾನ ವೈಪರೀತ್ಯವೇ ಕಾರಣ ಎಂದು ಪ್ರಾಥಮಿಕ ಸಂಶೋಧನೆಗಳ ವರದಿಯಿಂದ ಬಹಿರಂಗಗೊಂಡಿದೆ.
ಡಿಸೆಂಬರ್ 8ರಂದು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಕೂನೂರಿನಲ್ಲಿ ಹೆಲಿಕಾಪ್ಟರ್ ಪತನವಾಗಿತ್ತು. ಈ ವೇಳೆ ಹೆಲಿಕಾಪ್ಟರ್ನಲ್ಲಿದ್ದ ಬಿಪಿನ್ ರಾವತ್ ಹಾಗು ಅವರ ಪತ್ನಿ ಮಧುಲಿಕಾ ಸೇರಿದಂತೆ ಹಲವು ಸೇನಾ ಸಿಬ್ಬಂದಿ ವಿಧಿವಶರಾಗಿದ್ದರು.
ಕೇಂದ್ರ ಸರ್ಕಾರ ಸೇನಾ ಹೆಲಿಕಾಪ್ಟರ್ ಪತನದ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಏರ್ ಮಾರ್ಷಲ್ ಮನ್ವಿಂದರ್ ಸಿಂಗ್ ನೇತೃತ್ವದ ತನಿಖಾ ತಂಡ ರಚಿಸಿತ್ತು. ಇದೀಗ ಇಂದು ತಂಡ ತನಿಖೆ ನಡೆಸಿ ವರದಿ ಸಲ್ಲಿಸಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಹೆಲಿಕಾಪ್ಟರ್ ಪತನಕ್ಕೆ ಯಾವುದೇ ತಾಂತ್ರಿಕ ವೈಫಲ್ಯ, ವಿಧ್ವಂಸಕ ಕೃತ್ಯ ಅಥವಾ ನಿರ್ಲಕ್ಷ್ಯ ಕಾರಣವಾಗಿಲ್ಲ. ಹವಾಮಾನದಲ್ಲಾದ ದಿಢೀರ್ ಬದಲಾವಣೆಯಿಂದಾಗಿಯೇ ಈ ಅವಘಡ ಸಂಭವಿಸಿದೆ ಎಂದು ತನಿಖಾ ವರದಿಯಲ್ಲಿ ವಿವರಿಸಲಾಗಿದೆ.