ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಮೆಕ್ಸಿಕೋದಲ್ಲಿ ಕಂಡುಬರುವ ಅಪರೂಪದ, ಅಳಿವಿನಂಚಿನಲ್ಲಿರುವ ಮೀನಿನ ಸಂತತಿಯನ್ನು ವಿಜ್ಞಾನಿಗಳು ಮತ್ತೆ ವೃದ್ಧಿಸಿದ್ದಾರೆ.
ಟಕಿಲಾ ಸ್ಪ್ಲಿಟ್ಫಿನ್ ಅಥವಾ ಝೂಗೊನೆಟಿಕಸ್ ಟಕಿಲಾ ಎಂಬ ಸಣ್ಣ ಮೀನು ಈ ಹಿಂದೆ ಬಹಳ ಸಂಖ್ಯೆಯಲ್ಲಿತ್ತು. ಅಲ್ಲದೇ ಬಹಳ ಪ್ರಸಿದ್ಧಿಯನ್ನೂ ಪಡೆದಿತ್ತು. ಆದರೆ 1990ರ ದಶಕದಲ್ಲಿ ಈ ಮೀನು ಇದ್ದಕ್ಕಿದ್ದಂತೆ ಕಣ್ಮರೆಯಾಗಿತ್ತು. ಲಕ್ಷಾಂತರ ಸಂಖ್ಯೆಯಲ್ಲಿದ್ದ ಮೀನುಗಳ ಸಂಖ್ಯೆ ಬೆರಳೆಣಿಕೆಗಿಂತಲೂ ಕಡಿಮೆಯಾಗಿತ್ತು. ಇದೀಗ ವಿಜ್ಞಾನಿಗಳು ಅಳಿವಿನಂಚಿನಲ್ಲಿರುವ ಈ ಜಾತಿಯ ಮೀನುಗಳ ಸಂತತಿಯನ್ನು ಮರಳಿ ಪಡೆದಿದ್ದಾರೆ. ವಿಜ್ಞಾನಿಗಳ ಈ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ಕೇಳಿಬರುತ್ತಿದೆ.
ಎರಡು ದಶಕಗಳ ಹಿಂದೆ ಮಾಲಿನ್ಯ, ಮಾನವ ಚಟುವಟಿಕೆಗಳು ಮತ್ತು ಹವಾಮಾನ ವೈಪರೀತ್ಯದಿಂದ ಈ ಮೀನುಗಳ ಸಂತತಿ ಕಣ್ಮರೆಯಾಗಿತ್ತು. ಇವುಗಳ ಕಣ್ಮರೆಯಾದ ಎಂಟು ವರ್ಷಗಳ ಬಳಿಕ ಇಂಗ್ಲೆಂಡ್‌ನ ಚೆಸ್ಟರ್ ಮೃಗಾಲಯ ಮತ್ತು ಇತರ ಯೂರೋಪಿಯನ್ ಸಂಸ್ಥೆಗಳಿಂದ ಸಂರಕ್ಷಣಾಕಾರರು ಸಹಾಯಕ್ಕೆ ಮುಂದಾದರು.
ಅಕ್ವೇರಿಯಂಗಳಲ್ಲಿದ್ದ ಕಡೆಯ ಮೀನುಗಳನ್ನು ತಂದು ಅದರ ಅಭಿವೃದ್ಧಿ ಕಾರ್ಯ ಆರಂಭಿಸಲಾಯ್ತು. ನಂತರ ಈ ಮೀನುಗಳನ್ನು ನದಿಗೆ ಬಿಡಲಾಯ್ತು. ಆದರೆ ನದಿಯಲ್ಲಿ ಮೀನುಗಳು ಬೇಗ ಮೃತಪಡುತ್ತಿದ್ದವು. ಹಾಗಾಗಿ ಇದಕ್ಕಾಗಿಯೇ ಕೃತಕ ಕೊಳ ನಿರ್ಮಿಸಿ 40 ಜೋಡಿ ಮೀನುಗಳನ್ನು ಬಿಡಲಾಯ್ತು. ಈ ಮೀನುಗಳು ನಾಲ್ಕು ವರ್ಷದ ನಂತರ ಹತ್ತು ಸಾವಿರ ಮೀನುಗಳಾದವು. ಇವುಗಳನ್ನು ಉಳಿಸಲು ದೇಶದೆಲ್ಲೆಡೆಯಿಂದ ಧನಸಹಾಯ ಒದಗಿಬಂದಿದೆ. ಸತತ ಐದು ವರ್ಷಗಳ ಪ್ರಯತ್ನದಿಂದ ಮೀನಿನ ಸಂತತಿ ಶೇ.55ರಷ್ಟು ಹೆಚ್ಚಾಗಿದೆ.