ಇವತ್ತಿನ 5ಜಿ ಹರಾಜು ಪ್ರಕ್ರಿಯೆಗೆ ಏಕಿಷ್ಟು ಮಹತ್ವ? ಅಂಬಾನಿ-ಅದಾನಿ-ಮಿತ್ತಲ್ ಗಳೆಲ್ಲ ಏಕಿಷ್ಟು ಉತ್ಸುಕರು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದಲ್ಲಿ 5ಜಿ ತರಂಗಾಂತರ ಸೇವೆಗಳನ್ನು ಜಾರಿ ಮಾಡುವ ಕುರಿತು ಕೇಂದ್ರ ಸರ್ಕಾರದ ಅನುಮೋದನೆ ಸಿಕ್ಕಿದ್ದು ಇದರ ಭಾಗವಾಗಿ ಮೊದಲ ಪ್ರಮುಖ ಹಂತದ 5ಜಿ ತರಂಗಾಂತರ ಸೇವೆಗಳ ಹರಾಜು ಪ್ರಕ್ರಿಯೆ ಇಂದು ನಡೆಯುತ್ತಿದೆ.

ಪ್ರಮುಖ ನೆಟ್ವರ್ಕ್‌ ಕಂಪನಿಗಳು ಈ ಹರಾಜು ಪ್ರಕ್ರಿಯೆಯ ಭಾಗವಾಗಿದ್ದು ಜಿಯೋ, ಭಾರತೀಏರ್ಟೆಲ್‌, ವೋಡಾಫೋನ್‌ ಐಡಿಯಾ ಹಾಗೂ ಅದಾನಿ ಎಂಟರ್‌ ಪ್ರೈಸ್‌ ಕಂಪನಿಗಳು ಮುಖ್ಯ ಆಟಗಾರರಾಗಿ ಕಣದಲ್ಲಿದ್ದಾರೆ. ಸುಮಾರು 4.3 ಲಕ್ಷಕೋಟಿ ಮೌಲ್ಯದ 72GHz 5ಜಿ ತರಂಗಗಳ ಹಕ್ಕನ್ನು ಪಡೆದುಕೊಳ್ಳಲು ಈ ನಾಲ್ಕೂ ಕಂಪನಿಗಳ ಮಧ್ಯೆ ಪೈಪೋಟಿ ಏರ್ಪಟ್ಟಿದೆ. 20 ವರ್ಷಗಳ ಅವಧಿಗೆ 5ಜಿ ಸ್ಪೆಕ್ಟ್ರಂ ಅನ್ನು ಹರಾಜಿಗೆ ಇಡಲಾಗುತ್ತಿದ್ದು ಇಂದು ಮುಂಜಾನೆ ಹರಾಜು ಪ್ರಕ್ರಿಯೆ ಆರಂಭವಾಗಿದ್ದು ಸಂಜೆ 6 ಗಂಟೆಯವರೆಗೆ ನಡೆಯಲಿದೆ.

ತರಂಗಗಳ ನೈಜ ಬೇಡಿಕೆ ಆಧಾರದ ಮೇಲೆ ಹರಾಜಿನ ದಿನಗಳನ್ನು ನಿರ್ಧರಿಸಲಾಗುತ್ತದೆ ಎನ್ನಲಾಗಿದೆ. ವಿವಿಧ ಪ್ರಮಾಣಗಳಲ್ಲಿ ಈ ತರಂಗಾಂತರಗಳ ಹರಾಜು ನಡೆಯಲಿದೆ. 600 MHz, 700 MHz, 800 MHz, 900 MHz, 1800 MHz, 2100 MHz, 2300 MHz ಹೀಗೆ ವಿಭಿನ್ನ ಆವರ್ತನಗಳಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತದೆ. ಕಣದಲ್ಲಿರುವ ಸ್ಫರ್ಧಿಗಳ ಪೈಕಿ ಅಂಬಾನಿ ಒಡೆತನದ ಜಿಯೋ ಮುಂಚೂಣಿಯಲ್ಲಿದೆ ಎನ್ನಲಾಗುತ್ತಿದ್ದು ಒಟ್ಟೂ 14,000ಕೋಟಿಗಳನ್ನು ಅದು ಠೇವಣಿ ಇಟ್ಟಿದೆ. ಈ ವರ್ಷದ ಕೊನೆಯಲ್ಲಿ ಅಥವಾ 2023ರ ಪ್ರಾರಂಭದಲ್ಲಿ 5ಜಿ ಸೇವೆ ಲಭ್ಯವಾಗುವ ಕುರಿತು ನಿರೀಕ್ಷಿಸಬಹುದಾಗಿದೆ.

ಹೆಸರೇ ಸೂಚಿಸುವಂತೆ ಇದು ಪ್ರಸ್ತುತ ನಾವು ಬಳಕೆ ಮಾಡುತ್ತಿರುವ 4ಜಿ ನೆಟ್ವರ್ಕ್‌ ಗಿಂತ ಹೆಚ್ಚು ವೇಗದ ಇಂಟರ್ನೆಟ್‌ ಸೇವೆಯನ್ನು ಒದಗಿಸುತ್ತದೆ. 4ಜಿ ಯಲ್ಲಿ ನೀವು ಕೇವಲ 150mbps ವೇಗ ನಿರೀಕ್ಷಿಸಬಹುದು. ಆದರೆ 5ಜಿಯು 10gbps ಸಾಮರ್ಥ್ಯವನ್ನೂ ಹೊಂದಿದೆ. ಹಾಗೆಂದ ಮಾತ್ರಕ್ಕೆ ಇದರರ್ಥ ನಮ್ಮ ಮೊಬೈಲ್‌ ಡೇಟಾ ಸ್ಪೀಡ್‌ ಆಗುತ್ತದೆ ಎಂಬುದೊಂದೇ ಅಲ್ಲ, ನೀವು ವೀಕ್ಷಿಸುವ ಯೂಟ್ಯೂಬ್‌ ಅಥವಾ ಪ್ರೈಮ್‌ ನಲ್ಲಿ ನೀವು ನೋಡುವ ವಿಡಿಯೋಗಳ ಕ್ವಾಲಿಟಿ ಇನ್ನಷ್ಟು ಹೆಚ್ಚುತ್ತದೆ ಅಥವಾ ನೀವು ಒಂದು ಫಿಲ್ಮ್‌ ಅನ್ನು ಕೆಲವೇ ಸೆಕೆಂಡುಗಳಲ್ಲಿ ಡೌನ್ಲೋಡ್‌ ಮಾಡಬಹುದು ಎನ್ನುವುದನ್ನು ಹೊರತು ಪಡಿಸಿ 5ಜಿ ತರಂಗಗಳು ತರಲಿರೋ ತಂತ್ರಜ್ಞಾನ ಕ್ರಾಂತಿ ಬಹಳ ವಿಶಾಲವಾದದ್ದು.

ಏನೆಲ್ಲಾ ಬದಲಾಗಲಿದೆ?
ಇದು ಮುಂದಿನ ಪೀಳಿಗೆಯ ಸಂವಹನ ವ್ಯವಸ್ಥೆಯನ್ನು ಸೃಷ್ಟಿಸಲಿದೆ. ಅದೂ ಅಲ್ಲದೇ ಇಂಟರ್‌ ನೆಟ್‌ ಆಫ್‌ ಥೀಂಗ್ಸ್‌ ಅಂದರೆ ನಾವು ಬಳಸುವ ಸ್ಮಾರ್ಟ್‌ ವಾಚ್‌ ನಿಂದ ಹಿಡಿದು ಸ್ವಯಂ ಚಾಲಿತ ಕಾರುಗಳವರೆಗೂ ಈ 5 ಜಿ ಅನ್ವಯವಾಗುತ್ತದೆ. ಅಲ್ಲದೇ ಕೈಗಾರಿಕಾ ಕ್ಷೇತ್ರ, ಆರೋಗ್ಯ ಕ್ಷೇತ್ರ, ಉದ್ಯಮ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಕ್ಷಿಪ್ರ ಗತಿಯ ಬದಲಾವಣೆಗೆ ಇದು ಕಾರಣವಾಗುತ್ತದೆ. ಆರೋಗ್ಯ, ಶಿಕ್ಷಣ, ಮನರಂಜನೆ, ಕೃಷಿ, ರಿಯಲ್ ಎಸ್ಟೇಟ್ ಮುಂತಾದ ಕ್ಷೇತ್ರಗಳಲ್ಲಿನ ಪ್ರಗತಿಗೂ ಇದು ವೇಗ ತಂದುಕೊಡುತ್ತದೆ.

ಸ್ಮಾರ್ಟ್‌ ಹೋಮ್‌, ಸ್ಮಾರ್ಟ್‌ ಕಾರ್‌ ಗಳಂತಹ ವ್ಯವಸ್ಥೆಗಳಿಂದ ಸ್ಮಾರ್ಟ್‌ ಸಿಟಿ ನಿರ್ಮಾಣವಾಗಲು 5ಜಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಇದು ಮಾಹಿತಿಯನ್ನು ಸಂಗ್ರಹಿಸುವ ಮತ್ತು ಹಂಚಿಕೊಳ್ಳುವ ಕೋಟ್ಯಂತರ ಸಾಧನಗಳನ್ನು ನೈಜ ಸಮಯದಲ್ಲಿ ಒಗ್ಗೂಡಿಸುವ ಸಾಧ್ಯತೆಗೆ ಇಂಬು ನೀಡುತ್ತದೆ. ಕೃತಕ ಬುದ್ಧಿಮತ್ತೆ(ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್) ಮತ್ತು ಯಂತ್ರ ಕಲಿಕೆಯ‌ (ಮಷೀನ್‌ ಲರ್ನಿಂಗ್) ಗಳ ವಿಷಯದಲ್ಲಿ ಅನೇಕ ಸಾಧ್ಯತೆಗಳನ್ನು ಇದು ತೆರೆದಿಡುತ್ತದೆ. ಡೇಟಾಗಳ ನಿರ್ವಹಣೆಯ ಮುಂತಾದವುಗಳು ಕ್ಷಣಮಾತ್ರದಲ್ಲಿ ಸಂಭವಿಸುವಂತೆ ಮಾಡುವ ಸಾಮರ್ಥ್ಯ ಇದಕ್ಕಿದೆ.

ಹೀಗೆ ತಂತ್ರಜ್ಞಾನದಲ್ಲಿನ ವೇಗವು ಅಭಿವೃದ್ಧಿಯ ವೇಗಕ್ಕೆ ಕಾರಣವಾಗುತ್ತದೆ. ಅಭಿವೃದ್ಧಿಯಲ್ಲಿನ ವೇಗವು ಮಾನವ ವಿಕಾಸಕ್ಕೆ ಕಾರಣವಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!