CHANDRAYANA-3 | ನೌಕೆ ಲ್ಯಾಂಡಿಂಗ್ ಆಗೋದು ಹೇಗೆ? ಈ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಇಡೀ ವಿಶ್ವವೇ ಭಾರತದತ್ತ ಎದುರು ನೋಡುತ್ತಿದೆ. ಇಸ್ರೋದ ಬಹುತ್ವಾಕಾಂಕ್ಷಿ ಚಂದ್ರಯಾನ-3 ಇಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲಿದೆ.

ವಿಕ್ರಮ್ ಲ್ಯಾಂಡರ್‌ನ್ನು ಇಳಿಸುವ ಈ ಮಹತ್ವದ ಕ್ಷಣವನ್ನು ಕಣ್ತುಂಬಿಕೊಳ್ಳೋಕೆ ಇಡೀ ವಿಶ್ವವೇ ಕಾಯುತ್ತಿದೆ. ಭಾರತದಲ್ಲಿ ದೇಗುಲಗಳಲ್ಲಿ, ದರ್ಗಾ, ಚರ್ಚ್‌ಗಳಲ್ಲಿ ಚಂದ್ರಯಾನ ಯಶಸ್ಸಿಗಾಗಿ ಪ್ರಾರ್ಥನೆ ನಡೆಯುತ್ತಿದೆ.

ಪ್ರಗ್ಯಾನ್ ರೋವರ್‌ನ್ನು ಹೊತ್ತ ವಿಕ್ರಂ ಲ್ಯಾಂಡರ್ ಇಂದು ಸಂಜೆ 6:04ಕ್ಕೆ ಯಾವುದೇ ಅಡೆತಡೆಯಿಲ್ಲದೆ ಚಂದ್ರನ ಅಂಗಳದಲ್ಲಿ ಇಳಿಯುವ ಮೂಲಕ ಇತಿಹಾಸ ನಿರ್ಮಿಸಲಿದೆ. ಬೆಂಗಳೂರಿನ ಇಸ್ರೋ ಕೇಂದ್ರದಿಂದ ವಿಕ್ರಮ್ ಲ್ಯಾಂಡರ್‌ಗೆ ಸೂಚನೆಗಳನ್ನು ನೀಡಲಾಗುವುದು. ಅಂತೆಯೇ 25 ಕಿ.ಮೀ ಎತ್ತರದಿಂದ ಚಂದ್ರನ ಅಂಗಳದ ಕಡೆ ಲ್ಯಾಂಡರ್ ಇಳಿಯುತ್ತದೆ.

ಪ್ರತಿ ಸೆಕೆಂಡ್‌ಗೆ 1.68 ಕಿ.ಮೀ. ಅಂದರೆ ಗಂಟೆಗೆ 6,048 ಕಿ.ಮೀ ವೇಗದಲ್ಲಿ ಚಂದ್ರನ ಕಡೆಗೆ ಲ್ಯಾಂಡರ್ ಧಾವಿಸುತ್ತದೆ. ಇದರರ್ಥ ಏನು ಗೊತ್ತಾ? ವಿಮಾನಕ್ಕಿಂತ ಹತ್ತು ಪಟ್ಟು ವೇಗದಲ್ಲಿ ಚಂದ್ರನತ್ತ ಲ್ಯಾಂಡರ್ ಬರುತ್ತದೆ. ನಂತರ ಕ್ರಮೇಣ ವೇಗ ಕಡಿಮೆಯಾಗುತ್ತದೆ. ಚಂದ್ರನ ಮೇಲ್ಮೈಗೆ ಬಹುತೇಕ ಸಮತಲವಾಗಿಯೇ ಲ್ಯಾಂಡರ್ ಪ್ರಯಾಣಿಸುತ್ತದೆ ಇದನ್ನು ರಫ್ ಬ್ರೇಕಿಂಗ್ ಎನ್ನಲಾಗುತ್ತದೆ. 11 ನಿಮಿಷದ ಈ ಪ್ರಕ್ರಿಯೆ ನಂತರ ಫೈನ್ ಬ್ರೇಕಿಂಗ್ ಹಂತ ಆರಂಭವಾಗುತ್ತದೆ.

ಕಳೆದ ಬಾರಿ ಫೈನ್ ಬ್ರೇಕಿಂಗ್ ಹಂತದಲ್ಲಿಯೇ ಲ್ಯಾಂಡರ್ ನಿಯಂತ್ರಣ ಕಳೆದುಕೊಂಡಿತ್ತು. ಈ ಬಾರಿ ಯಾವುದೇ ಅಡೆತಡೆಯಿಲ್ಲದೆ ಲ್ಯಾಂಡರ್ ಸ್ಮೂತ್ ಲ್ಯಾಂಡಿಂಗ್ ಮಾಡಲಿ ಎನ್ನುವುದು ಪ್ರತಿಯೊಬ್ಬ ಭಾರತೀಯನ ಆಶಯವಾಗಿದೆ.

ಇನ್ನು ಚಂದ್ರನ ಮೇಲೆ ಕಾಲಿಟ್ಟ ಬಳಿಕ ಲ್ಯಾಂಡರ್ ತೆರೆದುಕೊಳ್ಳುತ್ತದೆ. ಪ್ರಗ್ಯಾನ್ ರೋವರ್ ಹೊರಬರುತ್ತದೆ. ನಂತರ ಅದು ಚಂದಿರದ ಅಂಗಳದಲ್ಲಿ ಸುತ್ತಾಡುತ್ತದೆ. ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ನಾಲ್ಕನೇ ದೇಶ ಭಾರತವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!