ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ವಾರದಲ್ಲಿ ಎಷ್ಟು ಗಂಟೆ ಕೆಲಸ ಮಾಡಬೇಕು ಅನ್ನೋ ಚರ್ಚೆ ಬಲು ಜೋರಾಗಿದೆ. ಇನ್ಫೋಸಿಸ್ ನಾರಾಯಣಮೂರ್ತಿ ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದು ಸೂಚಿಸಿದ್ದರು. ಈ ಹೇಳಿಕೆ ಕುರಿತು ಪರ ವಿರೋಧಗಳು ವ್ಯಕ್ತವಾಗಿತ್ತು.
ಇದರ ಬೆನ್ನಲ್ಲೇ ಇದೀಗ ಎಲ್ ಆ್ಯಂಡ್ ಟಿ ಮುಖ್ಯಸ್ಥ ಎಸ್ ಎನ್ ಸುಬ್ರಹ್ಮಣಿಯನ್ , ವಾರದಲ್ಲಿ 70 ಗಂಟೆ ಕೆಲಸ ಸಾಕಾಗುವುದಿಲ್ಲ, ಕನಿಷ್ಠ 90 ಗಂಟೆ ಕೆಲಸ ಮಾಡಬೇಕು ಎಂದಿದ್ದಾರೆ.
ನೀವು ಮನೆಯಲ್ಲಿ ಎಷ್ಟು ಹೊತ್ತು ಹೆಂಡ್ತಿ ಮುಖ ನೋಡುತ್ತಾ ಇರುತ್ತೀರಿ. ಮನೆಯಲ್ಲಿ ಕಡಿಮೆ ಸಮಯ ಕಳೆದು, ಕಚೇರಿಯಲ್ಲಿ ಹೆಚ್ಚಿನ ಸಮಯ ಕಳೆಯುವ ಮೂಲಕ ಗುರಿಯತ್ತ ಸಾಗಬೇಕು ಎಂದು ಸುಬ್ರಹ್ಮಣಿಯನ್ ಹೇಳಿದ್ದಾರೆ. ಇದೀಗ ಈ ಹೇಳಿಕೆ ಹೊಸ ಚರ್ಚೆಯನ್ನು ಹುಟ್ಟಿಹಾಕಿದೆ.
ವರ್ಕ್ ಲೈಫ್ ಬ್ಯಾಲೆನ್ಸ್ ಕುರಿತು ಚರ್ಚೆಗಳು ನಡೆಯತ್ತಿರುವ ಬೆನ್ನಲ್ಲೇ ಸುಬ್ರಹ್ಮಣಿಯನ್ ನೀಡಿದ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಎಲ್ ಆ್ಯಂಡ್ ಟಿ ಕಂಪನಿಯಲ್ಲಿ ಇದೀಗ ಉದ್ಯೋಗಿಗಳಿಗೆ ವಾರದಲ್ಲಿ 6 ದಿನ ಕೆಲಸಕ್ಕೆ ಸೂಚಿಸಲಾಗಿದೆ. ವಾರಾಂತ್ಯದಲ್ಲಿ 2 ದಿನ ರಜೆ ಬದಲು ಒಂದು ದಿನ ಮಾತ್ರ ರಜೆ ನೀಡಲಾಗುತ್ತಿದೆ. ಈ ಕುರಿತು ಮಾತನಾಡಿದ ಸುಬ್ರಹ್ಮಣಿಯನ್ 90 ಗಂಟೆ ಕೆಲಸದ ಅನಿವಾರ್ಯತೆ ಕುರಿತು ಹೇಳಿದ್ದಾರೆ.
ನಿಮನ್ನು ಭಾನುವಾರ ಕೆಲಸ ಮಾಡುವಂತೆ ಮಾಡಿಲ್ಲ ಅನ್ನೋ ಕೊರಗು ನನಗಿದೆ. ನೀವು ಭಾನುವಾರ ಕೆಲಸ ಮಾಡಿದರೆ ನಾನು ಹೆಚ್ಚು ಖುಷಿಪಡುತ್ತೇನೆ. ಕಾರಣ ನಾನು ಭಾನುವಾರವೂ ಕೆಲಸ ಮಾಡುತ್ತೇನೆ ಎಂದು ಸುಬ್ರಹ್ಮಣಿಯನ್ ಹೇಳಿದ್ದಾರೆ.
ವಾರದಲ್ಲಿ 90 ಗಂಟೆ ಕೆಲಸ ಸೂಚಿಸಿದ ಸುಬ್ರಹ್ಮಣಿಯನ್, ಉದ್ಯೋಗಿಗಳು ಮನೆಯಲ್ಲಿ ಹೆಚ್ಚು ಹೊತ್ತು ಕಳೆಯುವುದನ್ನೂ ಪ್ರಶ್ನಿಸಿದ್ದಾರೆ. ಉದ್ಯೋಗಿಗಳು ಹೆಂಡ್ತಿ ಮುಖವನ್ನು ಎಷ್ಟು ಹೊತ್ತು ನೋಡುತ್ತೀರಿ. ಮನೆಯಲ್ಲಿ ಸಮಯ ಕಳೆಯುವುದನ್ನು ಕಡಿಮೆ ಮಾಡಿ, ಇದರ ಬದಲು ಕಚೇರಿಯಲ್ಲಿ ಸಮಯ ಹೂಡಿಕೆ ಮಾಡಿ ಎಂದು ಸುಬ್ರಹ್ಮಣಿಯನ್ ಹೇಳಿದ್ದಾರೆ.
ಎಲ್ ಆ್ಯಂಡ್ ಟಿ ಕಂಪನಿಯಲ್ಲಿ ಶನಿವಾರವೂ ಉದ್ಯೋಗಿಗಳು ಕೆಲಸ ಮಾಡುವಂತೆ ಯಾಕೆ ಮಾಡಲಾಗಿದೆ ಅನ್ನೋ ಪ್ರಶ್ನೆಗೆ ಉತ್ತರಿಸಿದ ಸುಬ್ರಹ್ಮಣಿಯನ್, ನಾನು ಭಾನುವಾರವೂ ಉದ್ಯೋಗಿಗಳು ಕೆಲಸ ಮಾಡುವಂತೆ ಮಾಡಲು ಸಿದ್ಧನಿದ್ದೇನೆ. ಆದರೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದಿದ್ದಾರೆ. 90 ಗಂಟೆ ಕೆಲಸದ ಕುರಿತು ಸುಬ್ರಹ್ಮಣಿಯನ್ ಕೆಲ ಉದಾಹರಣೆಗಳನ್ನು ನೀಡಿದ್ದಾರೆ. ಚೀನಾ ಹಾಗೂ ಅಮೆರಿಕ ನಡುವೆ ಎಲ್ಲಾ ಕ್ಷೇತ್ರದಲ್ಲೂ ಪೈಪೋಟಿ ನಡೆಯುತ್ತಿದೆ. ಚೀನಾ ಆರ್ಥಿಕವಾಗಿ, ಸಾಮಾಜಿಕವಾಗಿ, ತಂತ್ರಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಯಾವ ರೀತಿ ಮುಂದೆ ಸಾಗಿದೆ ಅನ್ನೋದು ಗೊತ್ತೆ ಇದೆ. ಕಾರಣ ಚೀನಾದಲ್ಲಿ ಉದ್ಯೋಗಿಗಳು 90 ಗಂಟೆ ಕೆಲಸ ಮಾಡುತ್ತಾರೆ. ಆದರೆ ಅಮೆರಿಕದಲ್ಲಿ ವಾರದಲ್ಲಿ ಕೇವಲ 50 ಗಂಟೆ ಮಾತ್ರ ಕೆಲಸ ಮಾಡುತ್ತಾರೆ. ನೀವು ವಿಶ್ವದ ನಂ.1 ಆಗಬೇಕು ಎಂದರೆ ಕನಿಷ್ಠ 90 ಗಂಟೆ ಕೆಲಸ ಮಾಡಲೇಬೇಕು ಎಂದು ಸುಬ್ರಹ್ಮಣಿಯನ್ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ 90 ಗಂಟೆ ಕೆಲಸದ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. ಇದೀಗ ಜನರು ಸುಬ್ರಹ್ಮಣಿಯನ್‌ಗಿಂತ ನಾರಾಯಣಮೂರ್ತಿ ಪರ್ವಾಗಿಲ್ಲ ಎಂದು ಹಲವು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂಸ್ಥಾಪಕು, ಸಿಇಒ, ಮ್ಯಾನೇಜರ್ ಮೇಲೆ ಕುಳಿತು ಆರ್ಡರ್ ಮಾಡುವುದು ಸುಲಭ, ಕೆಲಸ ಮಾಡುವ ಸಾಮಾನ್ಯ ಉದ್ಯೋಗಿ, ಆತನ ಮೇಲಿರುವ ಕೆಲಸದ ಒತ್ತಡ, ಆತನ ವೇತನ ಎಲ್ಲವೂ ಮುಖ್ಯ. ಇದರ ನಡುವೆ ಸಣ್ಣ ಸಮಯದಲ್ಲಿ ಕುಟುಂಬ ನಿರ್ವಹಣೆ, ಕುಟುಂಬಕ್ಕಾಗಿ ಸಮಯ ಮೀಸಲಿಡುವುದು ಕಷ್ಟವಾಗುತ್ತದೆ. ಆದರೆ 70 ಗಂಟೆ, 90 ಗಂಟೆಕೆಲಸ ಎಂದರೆ ರೋಬೋಟ್ ಇಟ್ಟುಕೊಳ್ಳಬುಹುದು. ಮಾನವ ಸಂಪನ್ಮೂಲ ಬಳಕೆ ಯಾಕೆ ಮಾಡುತ್ತೀರಿ ಎಂದು ಹಲವರು ಪ್ರಶ್ನಿಸಿದ್ದಾರೆ.