ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಲಾಸ್ ಎಂಜಲ್ಸ್ ನಲ್ಲಿ ಹಬ್ಬಿರುವ ಕಾಡ್ಗಿಚ್ಚು ಲಕ್ಷಾಂತರ ಎಕರೆ ಕಾಡನ್ನು ನಾಶ ಮಾಡಿದೆ. ಗಂಟೆ ಗಂಟೆಗೂ ಬೆಂಕಿಯ ತೀವ್ರತೆ ಹೆಚ್ಚಾಗುತ್ತಲೇ ಇದ್ದು, ಇದೀಗ ಹಾಲಿವುಡ್ ಹಿಲ್ ಗೂ ಬೆಂಕಿ ವ್ಯಾಪಿಸಿದೆ.
ಹಾಲಿವುಡ್ ಹಿಲ್, ವಿಶ್ವ ಪ್ರಸಿದ್ಧ ಹಾಲಿವುಡ್ ನಟ, ನಟಿಯರು ಮಾತ್ರವೇ ಅಲ್ಲದೆ ವಿಶ್ವದ ಟಾಪ್ ಉದ್ಯಮಿಗಳು, ಕ್ರೀಡಾಪಟುಗಳು ವಾಸಿಸುವ ಸ್ಥಳವಾಗಿದ್ದು, ಹಾಲಿವುಡ್ ಹಿಲ್ಗೆ ಬೆಂಕಿ ವ್ಯಾಪಿಸುತ್ತಿದ್ದಂತೆ ಹಾಲಿವುಡ್ ನಗರದ ಬಹುತೇಕರನ್ನು ಸ್ಥಳಾಂತರ ಮಾಡಲಾಗಿದೆ.
ಹಾಲಿವುಡ್ ನಗರವಾಸಿಗಳಿಗೆ ‘ಇಮ್ಮಿಡಿಯಟ್ ಥ್ರೆಟ್ ಟು ಲೈಫ್’ (ಜೀವ ಹೋಗುವ ತೀವ್ರತರವಾದ ಸಾಧ್ಯತೆ) ಎಚ್ಚರಿಕೆಯನ್ನು ನೀಡಲಾಗಿದ್ದು, ಹಾಲಿವುಡ್ನ ಬಹುತೇಕ ಮನೆಗಳನ್ನು ಖಾಲಿ ಮಾಡಿಸಲಾಗಿದೆ. ಹಾಲಿವುಡ್ ಹಿಲ್ನ ಹತ್ತಿರದ ಕೆಲ ಬೃಹತ್ ಮನೆಗಳು ಈಗಾಗಲೇ ಬೆಂಕಿಗೆ ಆಹುತಿಯಾಗಿವೆ. ಹಾಲಿವುಡ್ನ ರಸ್ತೆಗಳಲ್ಲೆಲ್ಲ ಧೂಳು ತುಂಬಿದ್ದು, ಸೂರ್ಯನ ಬೆಳಕು ಸಹ ತಲುಪದಂಥಾ ಸ್ಥಿತಿ ನಿರ್ಮಾಣವಾಗಿದೆ ಎಂದು ಕೆಲ ವರದಿಗಳು ಹೇಳುತ್ತಿವೆ.
ಬಿಲ್ಲಿ ಕ್ರಿಸ್ಟಲ್, ಮ್ಯಾಂಡಿ ಮೂರೆ ಮತ್ತು ಪಾರಿಸ್ ಹಿಲ್ಟರ್ ಅವರ ಮನೆಗಳು ಸುಟ್ಟು ಕರಕಲಾಗಿವೆ. ಹಾಲಿವುಡ್ ಹಿಲ್ಸ್ನಲ್ಲಿ ಆಯೋಜನೆ ಮಾಡಲಾಗಿದ್ದ ಒಟ್ಟು ಮೂರು ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳನ್ನ ಮುಂದೂಡಲಾಗಿದೆ. ಮುಂದಿನ ವಾರ ನಡೆಯಬೇಕಿದ್ದ ಆಸ್ಕರ್ ಪ್ರಶಸ್ತಿ ನಾಮಿನೇಷನ್ ಕೂಡ ಮುಂದಕ್ಕೆ ಹಾಕಲಾಗಿದೆ. ಸಾವಿರಾರು ಜನರು ಸದ್ಯ ಲಾಸ್ ಎಂಜಲ್ಸ್ನಿಂದ ಸ್ಥಳಾಂತರಿಸಲಾಗಿದ್ದು ಹೀಗೆ ಸ್ಥಳಾಂತರಗೊಂಡವರು ತಮ್ಮ ಮನೆ ಉಳಿದಿದೆಯೋ? ಇಲ್ಲವೇ ಸುಟ್ಟು ಕರಕಲಾಗಿದೆಯೋ? ಎಂಬ ಚಿಂತೆಯಲ್ಲಿ ಇದ್ದಾರೆ.
1200ಕ್ಕೂ ಹೆಚ್ಚು ಮನೆಗಳು ಸುಟ್ಟು ಹೋಗಿವೆ. ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ ಲಕ್ಷಾಂತರ ಕೋಟಿ ಮೌಲ್ಯದ ನಷ್ಟವನ್ನು ಈ ಕಾಡ್ಗಿಚ್ಚು ಈಗಾಗಲೇ ಉಂಟು ಮಾಡಿದ್ದು, 2000 ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಗಾಳಿಯ ವೇಗ ಹೆಚ್ಚಾಗಿರುವ ಕಾರಣ ಕಾಡ್ಗಿಚ್ಚು ಬಲು ಬೇಗನೆ ಹಬ್ಬುತ್ತಿದ್ದು, ಬೆಂಕಿ ಇನ್ನೂ ತಹಬದಿಗೆ ಬಂದಿಲ್ಲ ಎನ್ನಲಾಗುತ್ತಿದೆ.