ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶವು ತುರ್ತು ಪರಿಸ್ಥಿತಿಯನ್ನುಎದುರಿಸುತ್ತಿದೆ ಎಂದು ಮಾಜಿ ಕುಸ್ತಿಪಟು ಮತ್ತು ಕಾಂಗ್ರೆಸ್ ಶಾಸಕಿ ವಿನೇಶ್ ಫೋಗಟ್ ಹೇಳಿದ್ದಾರೆ.
ಪಂಜಾಬ್ ರೈತರ ಪ್ರತಿಭಟನೆ ಮುಂದುವರಿದಿದ್ದು, ಖಾನೌರಿ ಗಡಿಯಲ್ಲಿ( ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರನ್ನು ವಿನೇಶ್ ಫೋಗಟ್ ಭಾನುವಾರ (ಡಿ. 15) ಭೇಟಿಯಾಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಫೋಗಟ್ ,ದಲ್ಲೆವಾಲ್ ಇತರರಿಗಾಗಿ ತನ್ನ ಪ್ರಾಣವನ್ನು ಪಣಕ್ಕಿಡಲು ಸಿದ್ಧರಿದ್ದಾರೆ. ಪಂಜಾಬ್, ಹರಿಯಾಣ ಮತ್ತು ಇಡೀ ದೇಶದ ಜನತೆ ಈ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ನಾನು ಕೋರುತ್ತೇನೆ. ದೇಶದಲ್ಲಿ ತುರ್ತು ಪರಿಸ್ಥಿತಿಯಂತಹ ಪರಿಸ್ಥಿತಿ ಇದೆ. ಸರ್ಕಾರವು ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು. ನಮ್ಮ ಪ್ರಧಾನಿ ದೊಡ್ಡ ಭಾಷಣಗಳನ್ನು ಮಾಡುತ್ತಾರೆ. ನಿನ್ನೆ ಸಂಸತ್ತಿನಲ್ಲೂ ಉದ್ದುದ್ದ ಭಾಷಣ ಮಾಡಿದರು. ಭಾಷಣವನ್ನು ಹೊರತುಪಡಿಸಿ ಏನಾದರೂ ಮಾಡಬೇಕಾಗಿದೆ. ಅವರು ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಹೇಳಿದ್ದಾರೆ.
ದೆಹಲಿಯ ಖನ್ನೌರಿ ಗಡಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ಸತತ 20ನೇ ದಿನವೂ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದಾರೆ. ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವೈದ್ಯರು ಮೆಡಿಕಲ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ. ಈ ನಡುವೆ, ದಲ್ಲೆವಾಲ್ ಅವರ ಆರೋಗ್ಯದ ಕಡೆಗೆ ಗಮನಹರಿಸುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.