ಹೊಸದಿಗಂತ ಡಿಜಿಟಲ್ ಡೆಸ್ಕ್:
ನವರಾತ್ರಿಯ ಒಂಬತ್ತು ದಿನಗಳು ಬಹಳ ವಿಶೇಷ. ದೇಶದ ನಾನಾ ಮೂಲೆಗಳಲ್ಲಿ ನವರಾತ್ರಿಯನ್ನು ಅತ್ಯಂತ ವಿಶಿಷ್ಟ ಸಂಪ್ರದಾಯಗಳಲ್ಲಿ ಆಚರಿಸಲಾಗುತ್ತದೆ. ಅದರಂತೆ ನೆರೆಯ ತೆಲಂಗಾಣ ರಾಜ್ಯದಲ್ಲಿ ʻಬತುಕಮ್ಮʼ ಹಬ್ಬ ಕೂಡ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಬತುಕಮ್ಮ ಹಬ್ಬ ಭಾದ್ರಪದ ಮಾಸದ ಕೊನೆಯ ದಿನ ಅಂದರೆ ‘ಮಹಾಲಯ ಅಮಾವಾಸ್ಯೆ’ಯ ದಿನದಂದು ಪ್ರಾರಂಭವಾಗುತ್ತದೆ. ಈ ಬತುಕಮ್ಮ ಪ್ರಾರಂಭವಾಗುವ ಹೊತ್ತಿಗೆ ಮಳೆ ನಿಲ್ಲುತ್ತದೆ, ಕೆರೆಗಳೆಲ್ಲ ತುಂಬಿ ವಿಧದ ಬೆಳೆಗಳು ಕೊಯ್ಲಿಗೆ ಸಿದ್ಧವಾಗಿರುತ್ತವೆ. ಆಗ ತಾನೆ ಚುಮುಚುಮು ಚಳಿ ಶುರುವಾಗಿ ಇಡೀ ಪ್ರಕೃತಿ ಜೀವಂತವಾಗಿ ಕಾಣುತ್ತಿರುತ್ತದೆ ಈ ಸಂದರ್ಭದಲ್ಲಿ ‘ಬತುಕಮ್ಮ’ ಹಬ್ಬ ಆಚರಣೆ ಮಾಡುತ್ತಾರೆ.
ಆಚರಣೆಯ ಹಿಂದಿರುವ ಕಥೆ
ಬತುಕಮ್ಮ ಆಚರಣೆಯ ಹಿಂದೆ ಹಲವು ಕಥೆಗಳಿವೆ. ಜಮೀನ್ದಾರರ ದುಷ್ಕೃತ್ಯಕ್ಕೆ ಬಲಿಯಾದ ಹೆಣ್ಣುಮಗುವಿಗೆ ನೂರು ವರ್ಷ ‘ಬತುಕಮ್ಮ’ ಎಂದು ವರದಾನ ಮಾಡಿದ ಸಂದರ್ಭವಿದು. ಧರ್ಮಂಗುಡೆ ರಾಜನಿಗೆ 100 ಮಕ್ಕಳು ಹುಟ್ಟಿ ಸತ್ತಾಗ ಕಟ್ಟಕಡಗೆ ಹುಟ್ಟಿದ ಮಗುವಿಗೆ ‘ಬತುಕಮ್ಮ’ ಎಂದು ಹೆಸರಿಟ್ಟರೆಂಬ ಇನ್ನೊಂದು ಐತಿಹ್ಯವಿದೆ. ಆಕೆ ಅಕ್ಷರಶಃ ಲಕ್ಷ್ಮಿ ದೇವಿಯ ಅವತಾರ, ಆಕೆಯನ್ನು ವರಿಸಲು ಸಾಕ್ಷಾತ್ ವಿಷ್ಣು ಚಕ್ರದ ಅವತಾರವನ್ನು ಧರಿಸುತ್ತಾರೆ ಎಂದೂ ಹೇಳಲಾಗುತ್ತದೆ.
ಇವು ಬತುಕಮ್ಮನ ಕುರಿತಾದ ಕೆಲವು ಜನಪ್ರಿಯ ಕಥೆಗಳು. ಕಥೆ ಏನೇ ಇರಲಿ, ಕಾರಣವೇನೇ ಇರಲಿ, ಈ ಹಬ್ಬವನ್ನು ಶತಮಾನಗಳಿಂದಲೂ ಆಚರಿಸಿಕೊಂಡು ಬರುತ್ತಿರುವುದು ಮಾತ್ರ ಸತ್ಯ. ದೇವರನ್ನು ಪೂಜಿಸುವ ಹೂಗಳೇ ʻಬತುಕಮ್ಮʼ ಮೂರ್ತಿಯಾಗಿ ಬದಲಾಗುವುದು ವಿಶೇಷ.
ಈ ಬತುಕಮ್ಮವನ್ನು ದೇವರನ್ನು ರಚಿಸಲು ಬಗೆಬಗೆಯ ಹೂಗಳು ಬೇಕು. ಸೇವಂತಿಗೆ, ಚೆಂಡು ಹೂ, ಗನ್ನೇರು, ಗುಲಾಬಿ ಮುಂತಾದ ಹೂವುಗಳನ್ನು ಸಾಲುಗಳಲ್ಲಿ ಜೋಡಿಸಲಾಗಿದೆ. ಹೀಗೆ ರಾಶಿ ಹಾಕಿದ ಹೂವುಗಳ ಮೇಲೆ ಅರಿಶಿನದಿಂದ ಮಾಡಿದ ಗೌರಿದೇವಿಯನ್ನು ಇಡುತ್ತಾರೆ. ಎಲ್ಲಾ ಮಹಿಳೆಯರು ಹೀಗೆ ರೂಪುಗೊಂಡ ಬತುಕಮ್ಮಗಳನ್ನು ಒಂದೆಡೆ ಇಟ್ಟು, ಅವುಗಳ ಸುತ್ತ ಈ ಹಬ್ಬದಲ್ಲಿನ ವಿಶೇಷ ಹಾಡುಗಳನ್ನು ಹಾಡುತ್ತಾ ಹೆಜ್ಜೆ ಹಾಕುತ್ತಾರೆ. ಎಲ್ಲಾ ಮುಗಿದ ನಂತರ ಬತುಕಮ್ಮನನ್ನು ನೀರಿನಲ್ಲಿ ವಿಸರ್ಜಿಸಿ, ಪ್ರಸಾದವನ್ನು ಪರಸ್ಪರ ಹಂಚುತ್ತಾರೆ.
ಬತುಕಮ್ಮದಲ್ಲಿ ಪ್ರತಿ ದಿನವೂ ಏನಾದರೂ ವಿಶೇಷತೆ ಇರುತ್ತದೆ. ಅದರ ಪ್ರಕಾರ ಅಂಗಿಲಿಪೂಲ ಬತುಕಮ್ಮ, ಅಟುಕುಲ ಬತುಕಮ್ಮ… ಹೀಗೆ ಒಂಬತ್ತು ವಿಭಿನ್ನ ಹೆಸರುಗಳಿಂದ ಕರೆಯುತ್ತಾರೆ. ಕೊನೆಯ ದಿನವಾದ ದುರ್ಗಾಷ್ಟಮಿಯಂದು ಸದ್ದುಲ ಬತುಕಮ್ಮನ ಹೆಸರಿನಲ್ಲಿ ಬತುಕಮ್ಮನಿಗೆ ಅನ್ನದಿಂದ ಮಾಡಿದ ವೈವಿಧ್ಯಮಯ ಪ್ರಸಾದ ನಿವೇದಿಸಲಾಗುತ್ತದೆ. ಈ ದಿನದ ವಿಸರ್ಜನೆಯಾದ ಬತುಕಮ್ಮನೊಂದಿಗೆ ಹಬ್ಬವು ಮುಕ್ತಾಯವಾಗುತ್ತದೆ.
ಬತುಕಮ್ಮ ಮಾಡಲು ದುಂದು ವೆಚ್ಚ ಬೇಕಿಲ್ಲ, ದುಬಾರಿ ಪ್ರಸಾದ ಬೇಡ. ಬತುಕಮ್ಮ ಪೂಜೆಗೆ ಇಂಥದ್ದೇ ನಿಯಮಗಳಿಲ್ಲ! ಕಣ್ಣೆದುರು ಕಾಣುವ ಹೂವುಗಳೇ ಮೂರ್ತಿ, ಮನೆಯಲ್ಲಿ ಕಾಣುವ ಅನ್ನವೇ ನೈವೇದ್ಯ, ಆಟಗಳೇ ಆಚರಣೆಗಳು. ನವರಾತ್ರಿಯಲ್ಲಿ ದೇವಿಯನ್ನು ಕಲಶದಿಂದ ಪೂಜಿಸುತ್ತಾರಂತೆ…ಈ ಬತುಕಮ್ಮನ ಅರ್ಥವೇನೆಂದರೆ ಪ್ರಕೃತಿ ದೇವಿಗೆ ಹೂವಿನ ಕಲಶವನ್ನಿಟ್ಟು ಪೂಜಿಸುವುದೇ ಈ ಹಬ್ಬದ ಅರ್ಥ.