ಮೇಘನಾ ಶೆಟ್ಟಿ, ಶಿವಮೊಗ್ಗ
ನಮ್ಗೆ ಕಾಡು ಬೇಕು, ಗಿಡ ಬೆಳೆಸ್ಬೇಕು, ಎಲ್ರೂ ಗಿಡ ನೆಡ್ಕೊಂತ ಹೋದ್ರೆ ಒಳ್ಳೆ ಗಾಳಿ ಬರತ್ತೆ, ನಾನು ಜೀವ ಇರೋವರೆಗೂ ಗಿಡ ಬೆಳೆಸ್ತೀನಿ..
ಮೂವತ್ತು ಸಾವಿರ ಮರಗಳ ಮಹಾತಾಯಿ, ಪದ್ಮಶ್ರೀ ಪುರಸ್ಕೃತೆ ತುಳಸಿಗೌಡ ಅವರ ಮಾತುಗಳಿವು. ಎಷ್ಟೊಂದು ಸಿಂಪಲ್ ಪದಗಳಾದ್ರೂ ನಿಧಾನಕ್ಕೆ ಓದಿದ್ರೆ ತುಂಬಾನೇ ಎಫೆಕ್ಟೀವ್. ಯಾರೋ ಪರಿಸರ ಪ್ರೇಮಿಗಳು ಗಿಡ ನೆಡ್ತಾರೆ, ನಾವು ಒಳ್ಳೆ ಗಾಳಿ ತಗೋತಿವಿ ಅನ್ನೋ ಜನರಿದ್ದಾರೆ, ಹೆಚ್ಚಂದ್ರೆ ಮನೆ ಮುಂದೆ ಎರಡು ಗಿಡ ಹಾಕಿ ಬೆಳೆಸಿ ಮರವಾಗಿಸ್ತಾರೆ, ಯಾಕಂದ್ರೆ ಮನೆ ಮುಂದೆ ನೆರಳು ಬೇಕು, ಗಾಡಿ, ಕಾರ್ ಬಿಸಿ ಆಗಬಾರದು! ಇದು ಈಗಿನ ರಿಯಾಲಿಟಿ.
ಬಟ್ ವೃಕ್ಷಮಾತೆ ತುಳಸಿಗೌಡ ಅವರಿಗೆ ಇದ್ಯಾವ ಯೋಚನೆಯೂ ಇಲ್ಲ. ಮಕ್ಕಳನ್ನು ಬೆಳೆಸೋಕೆ ಯಾರಾದ್ರೂ ಲಾಭ ನಷ್ಟ ಅಂತ ಯೋಚನೆ ಮಾಡ್ತಾರಾ? ಅದೇ ರೀತಿ ಮರಗಳೂ ನಮ್ಮ ಮಕ್ಕಳೇ! ತುಳಸಿಗೌಡ ಅವರು ಹಾಲಕ್ಕಿ ಗೌಡರು. ಜೀವನವಿಡೀ ಪರಿಸರಕ್ಕಾಗಿ ಮೌನವಾಗಿ ಕೆಲಸ ಮಾಡಿದವರು. ತನ್ನ 25ನೇ ವರ್ಷದಲ್ಲಿ ತಾಯಿಯನ್ನು ಕಳೆದುಕೊಂಡ ತುಳಸಿಗೌಡ ಅವರು ಅಮ್ಮನಂತೆ ಕಟ್ಟಿಗೆ ಮಾರಿ ಜೀವನ ಮಾಡಿದರು. ನಂತರ ಮತ್ತಿಘಟ್ಟ ಅರಣ್ಯ ನರ್ಸರಿಯಲ್ಲಿ ಕೆಲಸ ಮಾಡಿದ್ರು.
ಸತತ ಐವತ್ತು ವರ್ಷಗಳು ನರ್ಸರಿಯಲ್ಲಿ ಕೆಲಸ ಮಾಡಿ ನಿವೃತ್ತಿ ಪಡೆದ ತುಳಸಿಗೌಡ ಅವರು ಕಡೆಯ ದಿನಗಳಲ್ಲಿಯೂ ಗಿಡ ನೆಟ್ಟು ಖುಷಿ ಕಂಡವರು. ನಮ್ಮ ಆಕಾಶ, ಭೂಮಿ, ಮರ, ಗಿಡ, ಕಾಡು, ನೀರು ಇವೆಲ್ಲವೂ ಉಚಿತವಾಗಿ ಸಿಗೋ ಉಡುಗೊರೆಗಳು. ಇದಕ್ಕೆ ನಾವು ಋಣಿಯಾಗಿರಬೇಕು. ಪ್ರಕೃತಿಯ ಎಲ್ಲವನ್ನೂ ಬಳಸೋ ನಾವು ಏನಾದರೂ ವಾಪಾಸ್ ನೀಡಿ ಹೋಗಬೇಕು.
ಪುಟಾಣಿ ಗಿಡವನ್ನು ದೊಡ್ಡ ಮರ ಮಾಡೋದು ಹೇಗೆ? ಯಾವ ಗಿಡಕ್ಕೆ ಎಷ್ಟು ನೀರು ಬೇಕು? ಯಾವ ಗಿಡ ಯಾವ ಕಾಲದಲ್ಲಿ ಹೆಚ್ಚು ನೆಡಬೇಕು? ಈ ಎಲ್ಲ ಮಾಹಿತಿ ತುಳಸಿಗೌಡ ಅವರಿಗೆ ಇತ್ತು. ಕಳೆದ 6 ದಶಕಗಳಿಂದ ಯುವ ತಲೆಮಾರಿಗೆ ಮಾರ್ಗದರ್ಶನ, ತರಬೇತಿ ನೀಡುತ್ತಾ ಬಂದಿದ್ದಾರೆ. ಕಾಡಿನಲ್ಲಿ ಯಾವ ವಸ್ತುವೂ ವೇಸ್ಟ್ ಅಲ್ಲ. ಎಲೆಗಳು, ಬೀಜಗಳು, ಬಿದ್ದ ಕೊಂಬೆಗಳನ್ನು ತುಳಸಿಗೌಡ ಅವರು ಮರುಬಳಕೆ ಮಾಡುತ್ತಿದ್ದರು. ಅರಣ್ಯ ಬೆಳೆಸುವ ಕೆಲಸಕ್ಕೆ ಮಗ, ಸೊಸೆ, ಮೊಮ್ಮಕ್ಕಳು ಕೂಡ ಕೈ ಜೋಡಿಸಿದ್ದರು.
ಅರಣ್ಯ ಇಲಾಖೆ ನಡೆಸಿದ ಅರಣ್ಯೀಕರಣ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅವರ ಸೇವೆಯನ್ನು ಗುರುತಿಸಿ, ಇಲಾಖೆ ಅವರ ಸೇವೆಯನ್ನು ಕ್ರಮಬದ್ಧಗೊಳಿಸಿತ್ತು. 14 ವರ್ಷಗಳ ನಂತರ ಅವರು ಸೇವೆಯಿಂದ ನಿವೃತ್ತರಾಗಿದ್ದು, ನಂತರ ಪಿಂಚಣಿ ಪಡೆದು ಜೀವನ ಸಾಗಿಸುತ್ತಿದ್ದರು.ಕಾಡು ಅಂದರೆ ತುಳಸಿಗೌಡ ಅವರಿಗೆ ತವರಿನಂತೆ!
ಹಾಲಕ್ಕಿ ಬುಡಕಟ್ಟು ಕುಟುಂಬದಲ್ಲಿ ಜನಿಸಿದ ತುಳಸಿ ಗೌಡ ಅವರು ತೀವ್ರ ಬಡತನ ಅನುಭವಿಸಿದವರು. ಎರಡು ವರ್ಷದವರಿದ್ದಾಗ ತಂದೆಯನ್ನು ಕಳೆದುಕೊಂಡ ತುಳಸಿ ಅವರಿಗೆ ಔಪಚಾರಿಕ ಶಿಕ್ಷಣ ಸಿಕ್ಕಿರಲಿಲ್ಲ. ತಾಯಿಯೊಂದಿಗೆ ಕೂಲಿಗೆ ಹೋಗಿದ್ದ ತುಳಸಿ ಗೌಡ ಬಾಲ್ಯದಲ್ಲೇ ಗೋವಿಂದ ಗೌಡ ಎಂಬುವವರನ್ನು ವಿವಾಹವಾದರು. ಈ ದಾಂಪತ್ಯ ಬಹುಕಾಲ ಬಾಳಲಿಲ್ಲ. ಎಲ್ಲ ಕಷ್ಟ, ಸಂಕಷ್ಟಗಳನ್ನು ಸಹಿಸಿಕೊಂಡ ಅವರು, ಇಡೀ ರಾಷ್ಟ್ರಕ್ಕೆ ಮಾದರಿಯಾಗುವ ಜೀವನ ನಡೆಸಿದರು. ಕೇಂದ್ರ ಸರ್ಕಾರವೂ ಅವರ ಸಾಧನೆ ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು.
ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಅವರು ಅವರದ್ದೇ ಆದ ಹಾಲಕ್ಕಿ ಸಮುದಾಯದವರ ಪಾಲಿಗೆ ವೃಕ್ಷದೇವತೆ. ಇನ್ನು ಪರಿಸರ ಪ್ರಿಯರಿಗೆ ನಡೆದಾಡುವ ಅರಣ್ಯ ವಿಶ್ವಕೋಶ. ಅವರಿಗೆ ಕಾಡು ಮತ್ತು ಅಲ್ಲಿರುವ ಗಿಡ ಮರಗಳು ಎಲ್ಲರೂ ಚಿರಪರಿಚಿತ. ಅವುಗಳ ಕುರಿತ ತಿಳಿವಳಿಕೆ ಇತರರ, ಯುವ ತಲೆಮಾರಿನ ಜ್ಞಾನ ದಾಹ ತೀರಿಸುವಷ್ಟಿತ್ತು. ಕಾಡಿನ ಮರಗಳನ್ನು ಗುರುತಿಸುವ ಅವರ ಸಾಮರ್ಥ್ಯ ಕಂಡು ಬೆರಗಾಗದವರು ಇಲ್ಲ. ಗಿಡ ಮರಗಳ ಗಾತ್ರ ನೋಡಿ ಅವುಗಳ ವಯಸ್ಸು ಲೆಕ್ಕ ಹಾಕಿ ಹೇಳಬಲ್ಲವರಾಗಿದ್ದರು ತುಳಸಿ ಗೌಡ.
ಗಿಡ ಬೆಳೆಸೋದು ಸುಲಭದ ಮಾತಲ್ಲ, ಎಲ್ಲರ ಕೈಯಿಂದ ಮಣ್ಣಿಗೆ ಬೀಳುವ ಸಸಿ ಮರವಾಗೋದಿಲ್ಲ, ತುಳಸಿಗೌಡ ಅವರ ಕೈಯಲ್ಲಿ ಪ್ರೀತಿಯ ಜಾದು ಇತ್ತು. ಆಕೆ ಕೈ ಇಟ್ಟಿದ್ದೆಲ್ಲಾ ಚಿನ್ನವಾಗುತ್ತಿತ್ತು. ಈ ಪರಿಸರ ಪ್ರೇಮದ ದಂತಕಥೆ ಪೀಳಿಗೆ ಪೀಳಿಗೆಗೂ ದಾಟಲಿ. ಕಾಡು ಬೆಳೆಸಲು ಈಗಲೇ ಆಗದಿರಬಹುದು, ಆದರೆ ಒಂದು ಗಿಡದಿಂದ ಪಯಣ ಆರಂಭಿಸಬಹುದಲ್ವಾ?