ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಸುವ ಅಂತಿಮ ಗಡುವು ಭಾನುವಾರಕ್ಕೆ ಮುಕ್ತಾಯವಾಗಿದ್ದು, ಈ ನಡುವೆ ಸೆ.18ರವರೆಗೂ ಕಠಿಣ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸಾರಿಗೆ ಇಲಾಖೆ ಸೂಚನೆ ನೀಡಿದೆ.
ಸಾರಿಗೆ ಇಲಾಖೆ ಸೂಚನೆ ಹಿನ್ನೆಲೆಯಲ್ಲಿ ಇಂದು ಕೂಡ ನೋಂದಣಿಗೆ ಅವಕಾಶ ಇದ್ದು, ನೋಂದಣಿ ಮಾಡಿಸಿಕೊಳ್ಳದವರಿಗೆ ನೋಂದಣಿ ಮಾಡಿಸಿಕೊಳ್ಳುವ ಅವಕಾಶ ಸಿಕ್ಕಂತಾಗಿದೆ.
ಸೆಪ್ಟೆಂಬರ್ 18ರಂದು ಎಚ್‌ಎಸ್‌ಆರ್‌ಪಿ ಅಳವಡಿಕೆ ಸಂಬಂಧಿಸಿದ ಅರ್ಜಿ ವಿಚಾರಣೆಗೆ ಹೈಕೋರ್ಟ್ ನಲ್ಲಿ ಬರಲಿದೆ. ಹೀಗಾಗಿ, ಅಲ್ಲಿಯವರೆಗೆ ವಾಹನ ಮಾಲೀಕರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವುದು ಬೇಡ ಎಂದು ಸಾರಿಗೆ ಇಲಾಖೆ ಆಯುಕ್ತ ಎ.ಎಂ.ಯೋಗೀಶ್ ಹೇಳಿದ್ದಾರೆ.
ಸೋಮವಾರದಿಂದ ದಂಡ ವಿಧಿಸುವುದಾಗಿ ಕರ್ನಾಟಕ ಸಾರಿಗೆ ಇಲಾಖೆ ಘೋಷಣೆ ಮಾಡಿತ್ತು. ಕರ್ನಾಟಕ ಪೊಲೀಸ್ ಇಲಾಖೆ ಸಂಚಾರ ವಿಭಾಗ, ಸಾರಿಗೆ ಇಲಾಖೆಯವರೂ ಹಳೆ ನಂಬರ್ ಪ್ಲೇಟ್ ಇದ್ದ ವಾಹನದವರಿಗೆ ದಂಡವನ್ನು ವಿಧಿಸಲು ಆರಂಭಿಸಲಿದ್ದಾರೆನ್ನಲಾಗಿತ್ತು.