ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ತೇಜಸ್ ಲಘು ಯುದ್ಧ ವಿಮಾನಕ್ಕೆ ಮಲೇಷ್ಯಾದಲ್ಲಿ ಭರ್ಜರಿ ಬೇಡಿಕೆ ವ್ಯಕ್ತವಾಗಿರುವ ಹಿನ್ನೆಲೆ ರಕ್ಷಣಾ ಸಚಿವಾಲಯದ ಸಾರ್ವಜನಿಕ ವಲಯದ ಸಂಸ್ಥೆಯಾಗಿರುವ ಎಚ್‌ಎಎಲ್ ಕೌಲಾಲಂಪುರದಲ್ಲಿ ಕಚೇರಿ ತೆರೆಯಲು ಮುಂದಾಗಿದೆ.
ಇದರೊಂದಿಗೆ ರಕ್ಷಣಾ ಸಾಮಗ್ರಿಗಳ ತಯಾರಿಕೆಯಲ್ಲಿ ದೇಶ ಆತ್ಮನಿರ್ಭರವಾಗಬೇಕೆಂದು ಕೇಂದ್ರದ ಉದ್ದೇಶ ಈಡೇರುವ ದಿಸೆಯಲ್ಲಿ ಮತ್ತೊಂದು ಹೆಜ್ಜೆ ಇರಿಸಿದಂತಾಗಲಿದೆ. ಕೌಲಾಲಂಪುರದಲ್ಲಿ ಕಚೇರಿ ಸ್ಥಾಪಿಸುವುದಕ್ಕಾಗಿ ಎಚ್‌ಎಎಲ್‌ನ ಲಘು ಯುದ್ಧ ವಿಮಾನ ವಿಭಾಗದ ಪ್ರಧಾನ ವ್ಯವಸ್ಥಾಪಕ ರವಿ ಕೆ ಮತ್ತು ಫೋರ್ಟಿ ಡ್ರಸ್‌ನ ಮೇಜರ್ (ನಿವೃತ್ತ) ಮೊಹಮ್ಮದ್ ಹುಸೈರಿ ಬಿನ್ ಮಠ್ ಜೈನ್ ಒಪ್ಪಂದಕ್ಕೆ ಸಹಿ ಹಾಕಿದರು ಎಂದು ಮಲೇಷ್ಯಾದಲ್ಲಿರುವ ಎಚ್‌ಎಎಲ್ ಅಧಿಕೃತ ಪ್ರತಿನಿಧಿ ತಿಳಿಸಿದ್ದಾರೆ. ಕಚೇರಿ ಆರಂಭಿಸುವುದರಿಂದ ಎಚ್‌ಎಎಲ್, ರಾಯಲ್ ಮಲೇಷ್ಯನ್ ಏರ್ ಫೋರ್ಸ್‌ಗೆ (ಆರ್‌ಎಂಎಎಫ್) ಅಗತ್ಯವಿರುವ ಸು-೩೦ ಎಂಕೆಎಂ, ಹ್ವಾಕ್ ಮತ್ತು ಎಲ್‌ಸಿಎಯಂತಹ ಯುದ್ಧ ವಿಮಾನಗಳನ್ನು ಪೂರೈಸಲು ವ್ಯಾಪಾರದ ಹೊಸ ಅವಕಾಶಗಳನ್ನು ಪಡೆದುಕೊಳ್ಳಲು ನೆರವಾಗಲಿದೆ. ಎಂದು ಎಚ್‌ಎಎಲ್ ಹೇಳಿದೆ.