October 9, 2026
Friday, October 9, 2026
spot_img

‘ಮೊಳಕಾಲ್ಮೂರನ್ನು ಆಂಧ್ರಕ್ಕೆ ಸೇರಿಸಿ’ ಎಂದ ಶಾಸಕ ಎನ್.ವೈ.ಗೋಪಾಲಕೃಷ್ಣ ವಿರುದ್ಧ ಕೋಟೆನಾಡಿನಲ್ಲಿ ಭಾರಿ ಪ್ರತಿಭಟನೆ

ಹೊಸದಿಗಂತ ವರದಿ ಚಿತ್ರದುರ್ಗ:

ಮೊಳಕಾಲ್ಕೂರು ತಾಲ್ಲೂಕನ್ನು ಆಂಧ್ರಪ್ರದೇಶಕ್ಕೆ ಸೇರಿಸಬೇಕೆಂದು ಹೇಳಿರುವ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಯುವ ಕರ್ನಾಟಕ ವೇದಿಕೆ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಉಪ ವಿಭಾಗಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ಮೊಳಕಾಲ್ಮೂರು ತಾಲ್ಲೂಕನ್ನು ಆಂಧ್ರಪ್ರದೇಶಕ್ಕೆ ಸೇರಿಸಬೇಕು ಎಂದು ಹೇಳಿರುವುದು ನಮ್ಮ ಕನ್ನಡನಾಡಿಗೆ ದ್ರೋಹ ಬಗೆದಂತಾಗಿದೆ. ಕರ್ನಾಟಕದಲ್ಲಿ 5-6 ಬಾರಿ ಶಾಸಕರಾಗಿ ಕರ್ನಾಟಕದ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಭಾಷೆಯ ಬಗ್ಗೆ ಅಭಿಮಾನ ವ್ಯಕ್ತಪಡಿಸದೇ ಮೊಳಕಾಲ್ಮೂರು ತಾಲ್ಲೂಕನ್ನು ಆಂಧ್ರಕ್ಕೆ ಸೇರಿಸಿ ಎನ್ನುವುದು ನಮ್ಮ ನಾಡಿನ ಜನತೆಗೆ ಮತ್ತು ಈ ಭಾಗದ ಜನರಿಗೆ ಆಘಾತವುಂಟಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಈ ಶಾಸಕರಿಗೆ ಕರ್ನಾಟಕದ ನೆಲ-ಜಲ-ಭಾಷೆಯ ಕಿಂಚಿತ್ತು ಅಭಿಮಾನ ಇಲ್ಲ. ಕರ್ನಾಟಕದಲ್ಲಿ ಹುಟ್ಟಿ ಬೆಳೆದಿರುವ ಇಂತಹ ಶಾಸಕರು ನಮ್ಮ ಜಿಲ್ಲೆಗೆ, ನಮ್ಮ ನಾಡಿಗೆ ಬೇಕಿರುವುದಿಲ್ಲ. ಕೂಡಲೇ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿಗಳು ಮೊಳಕಾಲ್ಮೂರು ಶಾಸಕರಿಂದ ಕೂಡಲೇ ರಾಜೀನಾಮೆ ಪಡೆಯಬೇಕು. ಸರ್ಕಾರದ ವಿಧಾನಸಭಾ ಅಧ್ಯಕ್ಷರು ಇವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಇದನ್ನೂ ಓದಿ:

ಯುವ ಕರ್ನಾಟಕ ವೇದಿಕೆ ಜಿಲ್ಲಾಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷ ನವೀನ್, ಕಾರ್ಯದರ್ಶಿ ಓಬಣ್ಣ, ತಾಲ್ಲೂಕು ಕಾರ್ಯಾಧ್ಯಕ್ಷ ಮಣಿಕಂಠ, ಉಪಾಧ್ಯಕ್ಷ ಪ್ರಕಾಶ್, ಸಚಿನ್ ಅಣ್ಣಪ್ಪ, ನಾಗರಾಜ್, ರಘುನಾಥ್, ರೇಣುಕೇಶ್, ಮಂಜುನಾಥ್, ಸಿದ್ದೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Must Read