June 6, 2026
Saturday, June 6, 2026
spot_img

‘ಸಮುದ್ರ ಮಂಥನ ಮಿಷನ್’ಗೆ ಭಾರಿ ಯಶಸ್ಸು: ಅಂಡಮಾನ್ ದ್ವೀಪದಲ್ಲಿ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತದ ಇಂಧನ ವಲಯದಲ್ಲಿ ಹೊಸ ಆಶಾಕಿರಣ ಮೂಡಿದೆ. ಕೇಂದ್ರ ಸರ್ಕಾರದ ಸ್ವಾಮ್ಯದ ‘ಆಯಿಲ್ ಇಂಡಿಯಾ ಲಿಮಿಟೆಡ್’ (OIL) ಅಂಡಮಾನ್ ದ್ವೀಪಗಳ ಆಳ ಸಮುದ್ರದಲ್ಲಿ ಬೃಹತ್ ನೈಸರ್ಗಿಕ ಅನಿಲ ನಿಕ್ಷೇಪ ಇರುವುದನ್ನು ಅಧಿಕೃತವಾಗಿ ಖಚಿತಪಡಿಸಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಈ ಮಹತ್ವದ ಶೋಧನೆಯನ್ನು ‘ಇಂಧನ ಅವಕಾಶಗಳ ಮಹಾಸಾಗರ’ ಎಂದು ಬಣ್ಣಿಸಿದ್ದಾರೆ.

ಶೋಧನೆ ನಡೆದಿದ್ದು ಎಲ್ಲಿ? ಎಷ್ಟು ಆಳದಲ್ಲಿ?
ಅಂಡಮಾನ್ ದ್ವೀಪಗಳ ಪೂರ್ವ ಕರಾವಳಿಯಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ‘ಶ್ರೀ ವಿಜಯಪುರಂ-3’ ಎಂಬ ಪರಿಶೋಧನಾ ಬಾವಿಯಲ್ಲಿ ಈ ಅನಿಲ ಪತ್ತೆಯಾಗಿದೆ. 355 ಮೀಟರ್ ನೀರಿನ ಆಳದಲ್ಲಿ ಈ ಬಾವಿಯನ್ನು ಕೊರೆಯಲಾಗಿತ್ತು. 1900 ಪ್ಲಸ್ ಮೀಟರ್ ಆಳದಲ್ಲಿ ನಡೆಸಲಾದ ಆರಂಭಿಕ ಉತ್ಪಾದನಾ ಪರೀಕ್ಷೆಯ ವೇಳೆ, ನಿರಂತರವಾಗಿ ಜ್ವಾಲೆ ಮೂಡುವ ಮೂಲಕ ನೈಸರ್ಗಿಕ ಅನಿಲ ಇರುವುದು ಪಕ್ಕಾ ಆಗಿದೆ. ಆಯಿಲ್ ಇಂಡಿಯಾ ಈ ವಲಯದಲ್ಲಿ ಕೊರೆದಿರುವ 3 ಬಾವಿಗಳಲ್ಲಿ ಈಗಾಗಲೇ 2 ಬಾವಿಗಳಲ್ಲಿ ಇಂಧನ ಇರುವುದು ತಿಳಿದು ಬಂದಿದೆ.

‘ಸಮುದ್ರ ಮಂಥನ ಮಿಷನ್’ಗೆ ಸಿಕ್ಕ ಭಾರಿ ಯಶಸ್ಸು
ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದ ರಾಷ್ಟ್ರೀಯ ಆಳ ಸಮುದ್ರ ಪರಿಶೋಧನಾ ಯೋಜನೆ, ಅಂದರೆ ‘ಸಮುದ್ರ ಮಂಥನ ಮಿಷನ್’ ಅಡಿಯಲ್ಲಿ ಭಾರತವು ಸಮುದ್ರದಲ್ಲಿನ ತೈಲ ಮತ್ತು ಅನಿಲ ನಿಕ್ಷೇಪಗಳನ್ನು ಪತ್ತೆಹಚ್ಚುವ ಕೆಲಸವನ್ನು ತೀವ್ರಗೊಳಿಸಿತ್ತು. ಈ ಮಿಷನ್‌ಗೆ ಸಿಕ್ಕ ಅತ್ಯಂತ ದೊಡ್ಡ ಆರಂಭಿಕ ಯಶಸ್ಸು ಇದಾಗಿದೆ.

ಭಾರತದ ಇಂಧನ ಆಮದು ಅವಲಂಬನೆ ಕಡಿಮೆಯಾಗಲಿದೆಯೇ?
ಇದು ಸದ್ಯಕ್ಕೆ ದೇಶದ ಮುಂದಿರುವ ಅತಿ ದೊಡ್ಡ ಪ್ರಶ್ನೆಯಾಗಿದೆ. ಭಾರತವು ಪ್ರಸ್ತುತ ತನ್ನ ಕಚ್ಚಾ ತೈಲ ಅಗತ್ಯತೆಯ ಶೇಕಡಾ 85 ಕ್ಕಿಂತ ಹೆಚ್ಚು ಮತ್ತು ನೈಸರ್ಗಿಕ ಅನಿಲದ (LNG) ಬಹುದೊಡ್ಡ ಪಾಲನ್ನು ವಿದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತದೆ. ಭವಿಷ್ಯದಲ್ಲಿ ಇಲ್ಲಿ ವಾಣಿಜ್ಯಿಕವಾಗಿ ಉತ್ಪಾದನೆ ಆರಂಭವಾದರೆ, ಭಾರತದ ಆಮದು ಅವಲಂಬನೆ ಗಣನೀಯವಾಗಿ ತಗ್ಗಲಿದೆ. ಇದು ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾದಾಗ ಭಾರತೀಯ ಆರ್ಥಿಕತೆಗೆ ರಕ್ಷಣೆ ನೀಡಲಿದೆ. ಆದರೆ, ಈ ಶೋಧನೆ ಕೇವಲ ಮೊದಲ ಹೆಜ್ಜೆ ಮಾತ್ರ. ಇದು ಗ್ರಾಹಕರಿಗೆ ತಲುಪುವ ಮುನ್ನ ನಿಕ್ಷೇಪದ ನಿಖರ ಪ್ರಮಾಣದ ಮೌಲ್ಯಮಾಪನ, ಇನ್‌ಫ್ರಾಸ್ಟ್ರಕ್ಚರ್ ಅಭಿವೃದ್ಧಿ ಮತ್ತು ವಾಣಿಜ್ಯ ಅನುಮೋದನೆಗಳು ಬೇಕಾಗುವುದರಿಂದ ಇದಕ್ಕೆ ಹಲವು ವರ್ಷಗಳ ಸಮಯ ಹಿಡಿಯುತ್ತದೆ.

ಭಾರತದ ‘ಗಯಾನಾ’ ಆಗಲಿದೆಯೇ ಅಂಡಮಾನ್?
ಬೃಹತ್ ಆಫ್‌ಶೋರ್ ತೈಲ ನಿಕ್ಷೇಪಗಳ ಪತ್ತೆಯ ನಂತರ ಇಡೀ ಇಂಧನ ವಲಯವೇ ಬದಲಾದ ‘ಗಯಾನಾ’ ದೇಶಕ್ಕೆ ಅಂಡಮಾನ್ ಬೇಸಿನ್ ಅನ್ನು ಹೋಲಿಸಲಾಗುತ್ತಿದೆ. “ನಾವು ಅಂಡಮಾನ್ ಸಮುದ್ರದಲ್ಲಿ ಮತ್ತೊಂದು ದೊಡ್ಡ ಗಯಾನಾವನ್ನು ಪತ್ತೆಹಚ್ಚುವುದು ಕೇವಲ ಸಮಯದ ಆಟವಷ್ಟೇ” ಎಂದು ಸಚಿವ ಪುರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಾಥಮಿಕ ಸಮೀಕ್ಷೆಗಳ ಅಂದಾಜಿನ ಪ್ರಕಾರ, ಈ ಬೇಸಿನ್‌ನಲ್ಲಿ 307 ರಿಂದ 370 ಮಿಲಿಯನ್ ಮೆಟ್ರಿಕ್ ಟನ್ ತೈಲಕ್ಕೆ ಸಮಾನವಾದ ಹೈಡ್ರೋಕಾರ್ಬನ್ ಇರಬಹುದು ಎನ್ನಲಾಗಿದೆ.

ಮುಂದಿನ ನಡೆ ಏನು?
ಸದ್ಯ ಆಯಿಲ್ ಇಂಡಿಯಾ ಸಂಸ್ಥೆಯು ಈ ಅನಿಲದ ಸ್ವರೂಪ ಮತ್ತು ಗುಣಮಟ್ಟವನ್ನು ಅರಿಯಲು ಗ್ಯಾಸ್ ಸ್ಯಾಂಪ್ಲಿಂಗ್ ಹಾಗೂ ಕ್ಯಾಲೋರಿಫಿಕ್ ಮೌಲ್ಯದ ಅಧ್ಯಯನಗಳನ್ನು ನಡೆಸುತ್ತಿದೆ. ಬೃಹತ್ ಪ್ರಮಾಣದ ವಾಣಿಜ್ಯ ಕಾರ್ಯಾಚರಣೆಗೆ ಇದು ಸೂಕ್ತವೇ ಎಂದು ತಿಳಿಯಲು ಅಂತಾರಾಷ್ಟ್ರೀಯ ಆಳ ಸಮುದ್ರ ಪರಿಶೋಧನಾ ತಜ್ಞರ ಸಹಯೋಗದೊಂದಿಗೆ ಮತ್ತಷ್ಟು ಡ್ರಿಲ್ಲಿಂಗ್ ನಡೆಸಲಾಗುವುದು ಎಂದು ಸರ್ಕಾರ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !