ಮಡಿಕೇರಿಯಲ್ಲಿ ‘ಬೇಟೆ’ ಸಾಹಿತ್ಯೋತ್ಸವ: ವಿಶಿಷ್ಟ ಕಾರ್ಯಕ್ರಮದಲ್ಲಿ ಹಲವರು ಭಾಗಿ

ಹೊಸದಿಗಂತ ವರದಿ ಮಡಿಕೇರಿ:

‘ಬೇಟೆ’ ಆರಂಭವಾದ ಬಗೆ, ಬೆಳೆದ ಪರಿ, ಅಂತ್ಯವಾಗಬೇಕಾದ ಅನಿವಾರ್ಯತೆ ಹೀಗೆ ‘ಬೇಟೆ’ಯ ವಿವಿಧ ಮುಖಗಳು ಇಲ್ಲಿನ ಕೊಡವ ಸಮಾಜ ಸಭಾಂಗಣದ ‘ಕಾಕೆಮಾನಿ’ ವೇದಿಕೆ ಯಲ್ಲಿ ಅನಾವರಣಗೊಂಡವು.
ಅಲ್ಲಾರಂಡ ರಂಗಚಾವಡಿ ಹಾಗೂ ಸಿರಿಗನ್ನಡ ವೇದಿಕೆಯ ಕೊಡಗು ಘಟಕ ಆಯೋಜಿಸಿದ್ದ 67ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ‘ಬೇಟೆ’ ಸಾಹಿತ್ಯೋತ್ಸವದಲ್ಲಿ ಸೇರಿದ್ದ ಲೇಖಕರು, ವಿದ್ವಾಂಸರು
ಅನೇಕ ಹೊಸ ಹೊಸ ಸಂಗತಿಗಳನ್ನು ಸಭಿಕರಿಗೆ ತಿಳಿಸಿದರು. ಅಲ್ಲದೆ ‘ಬೇಟೆ’ ಕುರಿತು ಕವಿಗೋಷ್ಠಿಯೂ ನಡೆದು ಸಾಹಿತ್ಯಾಭಿಮಾನಿಗಳನ್ನು ತುದಿಗಾಲಿನಲ್ಲಿರಿಸಿತು.
ಕಾರ್ಯಕ್ರಮ ಉದ್ಘಾಟಿಸಿದ ಲೇಖಕಿ ಮಾಳೇಟಿರ ಸೀತಮ್ಮ ವಿವೇಕ್, ‘ಬೇಟೆ’ಯ ಇತಿಹಾಸ, ಬೆಳವಣಿಗೆಗಳನ್ನು ಕುರಿತು ಮಾತನಾಡಿದರು.

ಬಹು ಹಿಂದೆ ಬೆಳೆಗಳನ್ನು ನಾಶ ಮಾಡುತ್ತಿದ್ದಂತಹ ಹಾಗೂ ದನಕರುಗಳನ್ನು, ಮನುಷ್ಯರನ್ನು ತಿಂದು ಹಾಕುತ್ತಿದ್ದಂತಹ ಪ್ರಾಣಿಗಳನ್ನು ಮಾತ್ರವೇ ಜನರು ಬೇಟೆಯಾಡುತ್ತಿದ್ದರು. ಇದು ಕೃಷಿಯ ರಕ್ಷಣೆಗಾಗಿ ಮಾತ್ರವೇ ಆಗುತ್ತಿದ್ದ ಕೆಲಸ. ಹವ್ಯಾಸವಾಗಿ ಬೇಟೆಯಾಡುವ ಪ್ರವೃತ್ತಿ ಸಾಮಾನ್ಯರಲ್ಲಿ ಇರಲಿಲ್ಲ ಎಂದು ಪ್ರತಿಪಾದಿಸಿದರು.
ಬೇಟೆಯು ಹಲವು ಕಟ್ಟುಪಾಡುಗಳ ಮೂಲಕವೇ ನಡೆಯುತ್ತಿತ್ತು. ಇದರಲ್ಲಿ ಕಾಡನ್ನು ರಕ್ಷಿಸುವ ಜವಾಬ್ದಾರಿಯೂ ಅಡಕವಾಗಿತ್ತು. ಹಲವು ನಿಷೇಧಗಳ ಮಧ್ಯೆ ಬೇಟೆ ಆಗುತ್ತಿತ್ತು. ಆದರೆ, ಬ್ರಿಟಿಷರು ಬಂದ ನಂತರ ಬೇಟೆಯ ಸ್ವರೂಪವೇ ಬದಲಾಯಿತು. ಇದು ಹವ್ಯಾಸವಾಯಿತು. ಆದರೆ, ಈಗಿನ ಕಾಲಮಾನದಲ್ಲಿ ಬೇಟೆಯ ಅಗತ್ಯವೇ ಇಲ್ಲ ಎಂದರು.
ಕಾಕೆಮನಿ ಅವರು ಸ್ವಾತಂತ್ರ್ಯ ಹೋರಾಟಗಾರರೂ ಹೌದು. ಪಂದ್ಯಂಡ ಬೆಳ್ಳಿಯಪ್ಪ ಅವರೊಟ್ಟಿಗೆ ಅನೇಕ ಹೋರಾಟಗಳಲ್ಲಿ ಭಾಗಿಯಾಗಿದ್ದರು. ಅವರೊಬ್ಬ ಸಿನಿಮಾ ನಿರ್ಮಾಪಕರೂ ಆಗಿದ್ದರು ಎಂದು ಸ್ಮರಿಸಿದರು.
ಸುಮಾರು 20 ಸಾಹಿತಿಗಳು ಬರೆದಿರುವ ಬಿಡಿ ಕಥೆಗಳುಳ್ಳ ‘ಬೇಟೆ’ ಪುಸ್ತಕವನ್ನು ಇದೇ ಸಂದರ್ಭ ಬಿಡುಗಡೆ ಮಾಡಲಾಯಿತು.

ಬೇಟೆ ಸಾಹಿತ್ಯ ಕುರಿತು ಲೇಖಕ ಹಾಗೂ ವಕೀಲ ಕೆ.ಆರ್.ವಿದ್ಯಾಧರ ವಿಚಾರಗಳನ್ನು ಮಂಡಿಸಿದರು. ‘ಬೇಟೆ’ ವಿಷಯ ಕುರಿತು ಹಲವು ಮಂದಿ ಕವಿತೆಗಳನ್ನು ವಾಚಿಸಿ ಗಮನ ಸೆಳೆದರು.
ಸಾಧಕ ಕಲ್ಲುಮಾಡಂಡ ಜಿಮ್ಮಿ ಮಾದಯ್ಯ, ಕೊಡಗಿನ ಬೇಟೆ ಸಾಹಿತಿ ಬಿ.ಆರ್.ಜೋಯಪ್ಪ ಹಾಗೂ ಸಿನಿಮಾ ನಿರ್ಮಾಪಕ ಅವಿನಾಶ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಿರಿಗನ್ನಡ ವೇದಿಕೆ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ಚಿಂತಕರಾದ ನಾರಾಯಣಸ್ವಾಮಿ ಮತ್ತಿತರರು ಇದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!