ಹೊಸದಿಗಂತ ಡಿಜಿಟಲ್ ಡೆಸ್ಕ್
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಅವನಿ ಚಂಡಮಾರುತದ ಪರಿಣಾಮ ಮುಂದಿನ 48 ಗಂಟೆಗಳ ಕಾಲ ಕರ್ನಾಟಕದ ವಿವಿಧೆಡೆ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವು ಪ್ರದೇಶಗಳಲ್ಲಿ ಮಳೆಯಾಗುವುದಾಗಿ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೀನುಗಾರರಿಗೆ ಮುಂದಿನ 24 ಗಂಟೆ ಯಾವುದೇ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿಲ್ಲವಾದರೂ, ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಬೆಂಗಳೂರು, ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಮತ್ತು ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶುಕ್ರವಾರ ಸಂಜೆಯಿಂದಲೇ ಮಳೆಯಾಗುತ್ತಿದೆ. ಬೇಸಿಗೆಯಲ್ಲಿ ಮಳೆ ಬಂದಿರುವುದಕ್ಕೆ ಜನರು ಮತ್ತು ರೈತಾಪಿ ವರ್ಗ ಸಂತಸಗೊಂಡಿದ್ದಾರೆ. ಆದರೆ ವಿವಿಧ ಕಡೆಗಳಲ್ಲಿ ಗಾಳಿಯ ಅಬ್ಬರಕ್ಕೆ ಮನೆ, ಕಟ್ಟಡಗಳ ಚಾವಣಿಗೆ ಹಾನಿಯಾಗಿದ್ದು ವರದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ವಿವಿಧ ಕಡೆಗಳಲ್ಲಿ ಅಡಕೆ, ತೆಂಗು ಬೆಳೆಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.