ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ವಾರ ಚಿನ್ನದ ಬೆಲೆಯಲ್ಲಿ ದೊಡ್ಡ ಕುಸಿತ ಕಂಡುಬಂದಿತ್ತು. ಒಂದು ಗ್ರಾಮ್ ಚಿನ್ನದ ದರವೇ ಸಾವಿರ ರೂಪಾಯಿಗೂ ಹೆಚ್ಚಿನ ಮೊತ್ತದಲ್ಲಿ ಇಳಿಕೆಯಾಗಿ, ಆಭರಣ ಪ್ರಿಯರು ಮತ್ತು ಹೂಡಿಕೆದಾರರ ಗಮನ ಸೆಳೆದಿತ್ತು. ಆದರೆ, ಈ ವಾರದ ಆರಂಭದಲ್ಲೇ ಮಾರುಕಟ್ಟೆ ಚಿತ್ರಣ ಬದಲಾಗಿದೆ. ಇಂದು (ಸೋಮವಾರ) ಬಂಗಾರದ ಬೆಲೆ 148 ರೂಪಾಯಿಯವರೆಗೆ ಏರಿಕೆ ಕಂಡಿದೆ. ಎಂಸಿಎಕ್ಸ್ನಲ್ಲಿಯೂ ಚಿನ್ನ ಮತ್ತು ಬೆಳ್ಳಿ ದರಗಳು ಮೇಲ್ಮುಖವಾಗಿ ಸಾಗಿವೆ. ವಿದೇಶಿ ಮಾರುಕಟ್ಟೆಗಳಲ್ಲಿ ಹೆಚ್ಚಿನ ಕಡೆ ದರಗಳು ಯಥಾಸ್ಥಿತಿಯಲ್ಲಿದ್ದರೂ, ಕೆಲವೆಡೆ ಸಣ್ಣ ಪ್ರಮಾಣದ ಏರುಪೇರು ಕಂಡುಬಂದಿದೆ.
ಭಾರತದ ಮಾರುಕಟ್ಟೆಯಲ್ಲಿ ಸದ್ಯ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 1,16,000 ರೂಪಾಯಿ ಇದೆ. ಶುದ್ಧತೆಗೆ ಹೆಸರಾದ 24 ಕ್ಯಾರಟ್ ಅಪರಂಜಿ ಚಿನ್ನದ 10 ಗ್ರಾಮ್ ದರ 1,26,560 ರೂಪಾಯಿ ತಲುಪಿದೆ. ಇನ್ನು ಬೆಳ್ಳಿ ದರವೂ ಏರಿಕೆಯ ಹಾದಿಯಲ್ಲಿದ್ದು, 100 ಗ್ರಾಮ್ ಬೆಳ್ಳಿಯ ಬೆಲೆ 17,500 ರೂಪಾಯಿ ಇದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ಬಂಗಾರ ಮತ್ತು ಬೆಳ್ಳಿ ದರಗಳು ಸ್ಥಿರವಾಗಿ ಏರಿಕೆಯ ಲೆಕ್ಕಾಚಾರದಲ್ಲಿವೆ. ಬೆಂಗಳೂರಿನಲ್ಲಿ 10 ಗ್ರಾಮ್ ಚಿನ್ನದ ಬೆಲೆ 1,16,000 ರೂಪಾಯಿ ಇದ್ದು, 100 ಗ್ರಾಮ್ ಬೆಳ್ಳಿ ಬೆಲೆ 17,500 ರೂಪಾಯಿಯಲ್ಲಿ ಇದೆ. ಇದೇ ರೀತಿ ತಮಿಳುನಾಡು ಮತ್ತು ಕೇರಳ ಸೇರಿದಂತೆ ಇತರ ಪ್ರದೇಶಗಳಲ್ಲಿಯೂ 100 ಗ್ರಾಮ್ ಬೆಳ್ಳಿಯ ಬೆಲೆ 17,500 ರೂಪಾಯಿ ಆಗಿದೆ.
ಕಳೆದ ವಾರ ದರ ಇಳಿದಾಗ ಖರೀದಿಸಲು ಹಿಂಜರಿದವರಿಗೆ ಅಥವಾ ಇನ್ನಷ್ಟು ಇಳಿಯಬಹುದು ಎಂದು ಕಾದವರಿಗೆ ಇಂದಿನ ಏರಿಕೆ ಮಹತ್ವದ ಸೂಚನೆಯಾಗಿದೆ. ಮದುವೆ ಸೀಸನ್ ಮತ್ತು ಹೂಡಿಕೆಯ ಯೋಜನೆ ಇರುವವರು ಪ್ರತಿದಿನದ ದರ ಬದಲಾವಣೆಯನ್ನು ಗಮನಿಸಿ, ತಮ್ಮ ಬಜೆಟ್ಗೆ ತಕ್ಕಂತೆ ಖರೀದಿ ನಿರ್ಧಾರ ತೆಗೆದುಕೊಳ್ಳುವುದು ಒಳಿತು. ದರದಲ್ಲಿನ ಈ ಸಣ್ಣ ಏರಿಕೆ ಮುಂದಿನ ದಿನಗಳಲ್ಲಿ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದನ್ನು ಮಾರುಕಟ್ಟೆ ತಜ್ಞರು ಹಾಗೂ ಜನಸಾಮಾನ್ಯರು ಕುತೂಹಲದಿಂದ ಗಮನಿಸುತ್ತಿದ್ದಾರೆ.



