ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಒಕ್ಕಲಿಗ ಗೌಡ ಸಂಘದ ವತಿಯಿಂದ ನಿರ್ಮಾಣವಾಗುತ್ತಿರುವ ಸಮುದಾಯ ಭವನ ಸಮಾಜದ ಸ್ವಾಭಿಮಾನದ ಸಂಕೇತವಾಗಿದೆ. ಆ ನಿಟ್ಟಿನಲ್ಲಿ ಸಮಾಜ ಬಾಂಧವರ ಶ್ರಮ, ಶ್ರದ್ಧೆ ಹಾಗೂ ಭಕ್ತಿ ಶ್ಲಾಘನಾರ್ಹ ಎಂದು ಆದಿಚುಂಚನಗಿರಿ ಮಂಗಳೂರು ಕಾವೂರು ಶಾಖಾ ಮಠದ ಡಾ. ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.
ಅವರು ಬುಧವಾರ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಕಡಬದ ಹೊಸಮಠದಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಸಮುದಾಯ ಭವನದಲ್ಲಿ ಸಂಘದ ಆಡಳಿತ ಕಚೇರಿಯನ್ನು ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿದರು.
ಮನೆ ಮನೆ ಭೇಟಿ ಸೇರಿದಂತೆ ಹಾಕಿಕೊಂಡಿರುವ ಯೋಜನೆಗಳು ಸಮಾಜಕ್ಕೆ ಮಾದರಿಯಾಗಿದೆ. ಪ್ರತಿಯೊಬ್ಬರ ಸೇವೆಯ ಮೂಲಕ ಸಮುದಾಯ ಭವನ ಸುಂದರವಾಗಿ ನಿರ್ಮಾಣಗೊಂಡು ಲೋಕಾರ್ಪಣೆಗೊಳ್ಳಲಿ. ಆರ್ಥಿಕ ನೆರವಿನ ಜೊತೆಗೆ ಮಾನವ ಶ್ರಮದಾನದ ಸೇವೆಯೂ ಶ್ರೇಷ್ಠವಾದದ್ದು. ಒಂದು ವರ್ಷದಲ್ಲಿ ಇಲ್ಲಿ ಅದ್ಭುತವಾದ ಕೆಲಸ ನಡೆದಿದೆ. ಈ ಕಾರ್ಯವನ್ನು ಸಮಾಜ ಬಾಂಧವರು ಆನಂದ ಚಿತ್ತದಿಂದ ನೋಡಿ ತಮ್ಮ ಕೈಯಿಂದ ಆದಷ್ಟು ಸೇವೆ ಮಾಡಬೇಕು. ಸಮುದಾಯ ಭವನದ ಜೊತೆಗೆ ಹಾಕಿಕೊಂಡಿರುವ ಸಪ್ತ ಯೋಜನೆಗಳು ಪರಿಪೂರ್ಣ ವಾಗಲಿ ಎಂದು ಹಾರೈಸಿದರು.
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಕುಮಾರ್ ಕಡಬ ತಾಲೂಕು ಒಕ್ಕಲಿಗ ಗೌಡ ಸ್ವಸಹಾಯ ಸಂಘಗಳ ಲಾಂಛನ ಅನಾವರಣಗೊಳಿಸಿದರು.
ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು ಅಧ್ಯಕ್ಷತೆ ವಹಿಸಿದ್ದರು .
ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಸುಳ್ಯ ತಾಲೂಕು ಅಧ್ಯಕ್ಷ ಪಿ.ಎಸ್. ಗಂಗಾಧರ ಗೌಡ, ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಗೋಪಾಲಕೃಷ್ಣ ಗೌಡ ಪೂಯಿಲ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಂಜೋಡಿ, ಸಂಘಟನಾ ಕಾರ್ಯದರ್ಶಿ ಶಿವರಾಮ ಗೌಡ ಏನೆಕಲ್ಲು, ಯುವ ಸಂಘದ ಅಧ್ಯಕ್ಷ ಪೂಣೇಶ್ ಗೌಡ ಬಲ್ಯ, ಮಹಿಳಾ ಸಂಘದ ಅ‘ಕ್ಷೆ ವೀಣಾ ರಮೇಶ್ ಕೊಲ್ಲೆಸಾಗು, ಕಾರ್ಯದರ್ಶಿ ಲಾವಣ್ಯ ಮಂಡೆಕರ ಉಪಸ್ಥಿತರಿದ್ದರು.