ಹೊಸದಿಗಂತ ಡಿಜಿಟಲ್ ಡೆಸ್ಕ್:
ಪತ್ನಿಯ ಮೇಲಿನ ದ್ವೇಷದಿಂದಾಗಿ ಆಕೆಯ ಕುಟುಂಬದ ಏಳು ಮಂದಿಯನ್ನು ಪತಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಳ್ಳಂಬೆಳಗ್ಗೆ ಸುದ್ದಿ ಕೇಳಿ ಜನ ಬೆಚ್ಚಿಬಿದ್ದಿದ್ದು ಆರೋಪಿಯನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಇಂದುಶೇಖರ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆತ ಪತ್ನಿಯ ಮೇಲಿನ ದ್ವೇಷಕ್ಕೆ ಏಳು ಮಂದಿಯನ್ನು ಕೊಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಅಷ್ಟರೊಳಗೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಶ್ರೀರಾಮಪುರದ ರೂಪವತಿ, ಮಗಳು ಸುನೀತಾ, ಮಕ್ಕಳಾದ ಶಿವಕುಮಾರ್, ಶಂಕರ್, ಸೊಸೆಯಂದಿರಾದ ದಿವ್ಯಾ ಹಾಗೂ ನಳಿನಿ, ಏಳು ವರ್ಷದ ಮೊಮ್ಮಗ ಪುನೀತ್‌ರನ್ನು ಕೊಲೆ ಮಾಡಲಾಗಿದೆ. ಇಪ್ಪತ್ತು ವರ್ಷದ ಹಿಂದೆ ಸುನಿತಾರನ್ನು ಇಂದುಶೇಖರ್ ಮದುವೆಯಾಗಿದ್ದರು. ಸುನಿತಾ ತನ್ನ ತವರು ಮನೆಯ ಜೊತೆ ಹೆಚ್ಚಿನ ಓಡಾಟ, ಒಡನಾಟ ಇಟ್ಟುಕೊಂಡಿದ್ದು ಇಂದುಶೇಖರ್‌ಗೆ ಇಷ್ಟವಿರಲಿಲ್ಲ. ಈ ವಿಚಾರವಾಗಿ ಇಬ್ಬರ ಮಧ್ಯೆ ಜಗಳಗಳು ಬರುತ್ತಿದ್ದವು. ಸದಾ ತವರುಮನೆಯನ್ನು ವಹಿಸಿಕೊಂಡು ಬರುತ್ತಿದ್ದ ಪತ್ನಿ ಮೇಲೆ ಅಸಮಾಧಾನವಿತ್ತು.
ಮನೆಯಲ್ಲಿ ನಡೆದ ಜಗಳ ತಾರಕಕ್ಕೇರಿದ ಸಂದರ್ಭ ರುಬ್ಬುವ ಕಲ್ಲಿನಿಂದ ಸುನಿತಾ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ನಂತರ ಸುನಿತಾ ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಿದ್ದಾಳೆ ಎಂದು ಎಲ್ಲರಿಗೂ ಕಥೆ ಹೇಳಿದ್ದಾನೆ. ನಂತರ ಪಾರ್ಟಿ ಮಾಡೋಣ ಬನ್ನಿ ಎಂದು ಬಾಮೈದರಾದ ಶಿವಕುಮಾರ್ ಹಾಗೂ ಶಂಕರ್‌ಗೆ ಮನೆಗೆ ಬರುವಂತೆ ಆಹ್ವಾನ ನೀಡಿದ್ದಾನೆ. ಮನೆಗೆ ಬಂದವರನ್ನು ಹೊಡೆದು ಕೊಲೆ ಮಾಡಿದ್ದಾನೆ. ತದನಂತರ ಮನೆಗೆ ಬಂದ ಅವರ ಪತ್ನಿಯರಾದ ದಿವ್ಯಾ, ನಳಿನಿ ಹಾಗೂ ಅತ್ತೆ ರೂಪವತಿ, ಮಗ ಪುನೀತ್‌ನನ್ನೂ ಕೊಲೆ ಮಾಡಿದ್ದಾನೆ.
ಬಳಿಕ ಚಿಕ್ಕಬಳ್ಳಾಪುರದ ನಂದಿಬೆಟ್ಟ ಸುತ್ತಮುತ್ತ ಮೃತದೇಹಗಳನ್ನು ಎಸೆದಿದ್ದಾನೆ. ನಾಲ್ಕೈದು ಗಂಟೆಗಳ ಹುಡುಕಾಟದ ನಂತರ ಬಾಲಕನ ಶವ ಪತ್ತೆಯಾಗಿದೆ. ಉಳಿದ ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ. ಶವ ಸಾಗಿಸಿದ ಕಾರು, ಕೊಲೆ ಮಾಡಿದ ರುಬ್ಬುಗುಂಡನ್ನು ವಶಕ್ಕೆ ಪಡೆಯಲಾಗಿದೆ.
ನಳಿನಿ ಕಾಣಿಸಿದ ಹಿನ್ನೆಲೆ ಆಕೆಯ ತಾಯಿ ಶ್ರೀರಾಮಪುರ ಠಾಣೆಯಲ್ಲಿ ದೂರು ನೀಡಿದ್ದಾರೆ. ತನಿಖೆ ಆರಂಭವಾದಾಗ ಇಂದುಶೇಖರನನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆತನ ಹೇಳಿಕೆಗಳು ಗೊಂದಲಮಯವಾಗಿದ್ದು, ಪೊಲೀಸರಿಗೆ ಅನುಮಾನ ಡಬಲ್ ಆಗಿದೆ. ನಂತರ ಆತನ ಮನೆಗೆ ಹೋದಾಗ ಕೊಲೆ ಮಾಡಿದ್ದಕ್ಕೆ ಹಲವಾರು ಸಾಕ್ಷ್ಯಗಳು ಸಿಕ್ಕಿವೆ. ತದನಂತರ ಸತ್ಯವನ್ನು ಆತ ಒಪ್ಪಿಕೊಂಡಿದ್ದಾನೆ.



