ಇತ್ತೀಚೆಗೆ ನನ್ ಗಂಡ ತುಂಬಾ ಪ್ರೀತಿ ತೋರಿಸ್ತಿದ್ದಾನೆ. ಆಫೀಸ್ ಇಂದ ಬೇಗ ಬರ್ತಾನೆ. ಬರುವಾಗ ನನಗಿಷ್ಟದ ತಿಂಡಿ ತರೋದು, ಸುಸ್ತಾಗಿ ಮನೆಗೆ ಬಂದಾಗಲೂ ಪಾತ್ರೆ ತೊಳೆದುಕೊಡೋದು, ಅಡುಗೆ ಮನೆಯಲ್ಲೇ ನಿಂತು ನನ್ನ ಜೊತೆ ಹರಟೆ ಹೊಡೆಯೋದು..
ಇದೆಲ್ಲಾ ಗಂಡಸರ ಮಾಮೂಲಿ ಬಿಹೇವಿಯರ್ ಅಂತ ನಂಬೋಕೆ ಸಾಧ್ಯವಾ? ಗಟ್ಟಿ ಮನಸ್ಸು ಮಾಡಿ ಗಂಡನ ಬಳಿ ಕೇಳಿಯೇ ಬಿಟ್ಟಳು. ರೀ ನಿಮಗೆ ಬೇರೆ ಅಫೇರ್ ಇದೆಯಾ? ನನಗೇನಾದರೂ ಮೋಸ ಮಾಡಿದ್ದೀರಾ? ಯಾಕಿಷ್ಟು ಸ್ವೀಟ್ ಆಗಿದ್ದೀರಾ?
ಗಂಡನಿಗೆ ಆಶ್ಚರ್ಯ ಆಯ್ತು, ಇದೇ ತಾನೆ ಹೆಂಗಸರು ಬಯಸೋದು, ಪ್ರೀತಿಯಿಂದ ನಡೆದುಕೊಂಡರೂ ನನ್ನಾಕೆಗೆ ಈ ಅನುಮಾನ ಯಾಕೆ? ತಕ್ಷಣ ಜೇಬಿನಿಂದ ಒಂದು ಪತ್ರ ಕೊಟ್ಟ. ಇದನ್ನು ನಾನು ಓದಿದೆ ಈಗ ನೀನು ಓದು ಎಂದ.
ಆ ಪತ್ರ ಗಂಡನ ತಾಯಿ ಬರೆದಿದ್ದು, ”ಮಗನೇ, ಈ ಮಾತುಗಳನ್ನು ಮುಂಚೆಯೇ ಹೇಳಬೇಕಿತ್ತು. ಈಗ ಹೇಳ್ತಿದ್ದೇನೆ. ನೀನು ಹುಟ್ಟುವ ಮುನ್ನ ನಿನ್ನ ತಂದೆ ನಾನು ತುಂಬಾ ಚೆನ್ನಾಗಿದ್ವಿ ಆದರೆ ಕೈಯಲ್ಲಿ ಹಣ ಇರಲಿಲ್ಲ. ನೀನು ಹುಟ್ಟಿದ ನಂತರ ಅವರಿಗೆ ಒಳ್ಳೆ ಕೆಲಸ, ಸಂಬಳ ಸಿಕ್ತು. ನಿನ್ನ ತಂಗಿ ಹುಟ್ಟಿದ ಮೇಲೆ ನನ್ನನ್ನು ಮನೆಯಲ್ಲೇ ಹಾಯಾಗಿರು ಎಂದು ಹೇಳಿ ಕೆಲಸ ಬಿಡಿಸಿದ್ರು. ಅಷ್ಟೊತ್ತಿಗಾಗಲೇ ನಿಮ್ಮಪ್ಪನ ಮಾತು ಕಮ್ಮಿ ಆಗಿತ್ತು. ಅವರಿಗೆ ಕೆಲಸ, ದುಡಿಮೆ ಮುಖ್ಯವಾಗಿತ್ತು. ನನಗೆ ನೀವಿಬ್ಬರೇ ಪ್ರಪಂಚ. ವರ್ಷಗಳು ಕಳೆದ ನಂತರ ನೀವಿಬ್ಬರೂ ನನ್ನ ಮಾತು ಆಲಿಸೋದು ನಿಲ್ಲಿಸಿದಿರಿ. ನಿನ್ನಪ್ಪ ನನ್ನನ್ನು ಕೂಗುತ್ತಿದ್ದು, ಬರೀ ಊಟ ತಿಂಡಿ ಮಾತ್ರೆಗೆ ಮಾತ್ರ. ಇದೀಗ ಅವರಿಗೂ ಕಾಯಿಲೆ, ನನ್ನ ಆರೋಗ್ಯವೂ ಸರಿಯಿಲ್ಲ. ತುಂಬು ಕುಟುಂಬದಲ್ಲಿ ನಾನು ಒಬ್ಬಂಟಿಯಾಗಿದ್ದೆ. ಮನೆಯಲ್ಲಿ ಕೆಲಸ ಮಾಡುವ ಮಹಿಳೆಗೂ ಮನಸ್ಸಿದೆ. ಈ ಪತ್ರ ಬರೆದು ನಿನಗೆ ದುಃಖ ಕೊಡಬೇಕು ಅಂತಿಲ್ಲ, ಇನ್ನೇನು ನಾವು ಕಣ್ಮುಚ್ಚುವ ಕಾಲ ಸಮೀಪ ಇದೆ. ಈಗ ಹೇಳದಿದ್ದರೆ ನಿನ್ನ ಸಂಸಾರವೂ ನನ್ನ ಸಂಸಾರದಂತೆಯೇ ಆಗಬಹುದು, ನೀನು ನಿಮ್ಮಪ್ಪನಂತೆ!ನಿನ್ನ ಹೆಂಡತಿ, ನಿನ್ನ ಮಕ್ಕಳಿಗೆ ಈ ರೀತಿಪತ್ರ ಬರೆದು ಹೇಳೋದು ಬೇಡ. ನೀನು ಹೆಂಡತಿಯನ್ನು ಚೆನ್ನಾಗಿ ನೋಡಿಕೋ, ಸಂಸಾರದ ಖುಷಿಯನ್ನು ಅನುಭವಿಸು” ಎಂದಿತ್ತು.
ಹಣ ಇಲ್ಲದೆ ಜೀವನ ನಡೆಸೋದು ಕಷ್ಟವೇ, ಆದರೆ ಪ್ರೀತಿ ಇಲ್ಲದೆ ಉಸಿರಾಡೋದು ಕೂಡ ಕಷ್ಟ. ಸಂಸಾರದಲ್ಲಿ ಹಣದ ಜೊತೆ ಪ್ರೀತಿಪಾತ್ರರ ಜತೆ ಸಮಯ ಕಳೆದರೆ ಮಾತ್ರ ಜೀವನ ಚೆನ್ನಾಗಿ ಇರುತ್ತದೆ. ಸಣ್ಣ ಪಾಸ್ ಕೊಟ್ಟು ಆಲೋಚಿಸಿ!