Monday, December 11, 2023

Latest Posts

ಕುತುಬ್‌ ಮಿನಾರ್‌, ಗ್ಯಾನವಾಪಿ ನಡುವೆ ಚಾರ್ಮಿನಾರ್‌ ಚರ್ಚೆ: ಪ್ರಾರ್ಥನೆಗೆ ಅವಕಾಶ ಕಲ್ಪಿಸುವಂತೆ ʻಕೈʼ ನಾಯಕ ಆಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕುತುಬ್ ಮಿನಾರ್, ಗ್ಯಾನವಾಪಿ ಮತ್ತು ಶಾಹಿ ಈದ್ಗಾ ದೇಶಾದ್ಯಂತ ಚರ್ಚೆಯ ವಿಷಯಗಳಾಗಿದ್ದು, ನ್ಯಾಯಾಲಯದ ವ್ಯಾಪ್ತಿಯಲ್ಲಿವೆ. ಇವುಗಳ ಜೊತೆಗೆ ಮತ್ತೊಂದು ವಿವಾದ ಎದ್ದಿದೆ. ಕಾಂಗ್ರೆಸ್ ನಾಯಕ ರಶೀದ್ ಖಾನ್ ಅವರು ಹೈದರಾಬಾದ್ ಚಾರ್ಮಿನಾರ್‌ನಲ್ಲಿ ಪ್ರಾರ್ಥನೆಗೆ ಅವಕಾಶ ಕಲ್ಪಿಸುವಂತೆ ಸಹಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಅವರ ಈ ನಿರ್ಣಯ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಪ್ರಸ್ತುತ ಚಾರ್ಮಿನಾರ್ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ರಕ್ಷಣೆಯಲ್ಲಿದೆ. ಎರಡು ದಶಕಗಳ ಹಿಂದೆ ಚಾರ್ಮಿನಾರ್ ಬಳಿ ಪ್ರಾರ್ಥನೆ ನಡೆಯುತ್ತಿತ್ತು.‌ ಚಾರ್ಮಿನಾರ್ ಸ್ಥಳದಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಪ್ರಾರ್ಥನೆಯನ್ನು ನಿಲ್ಲಿಸಲಾಯಿತು. ಹಾಗಾಗಿ ಇದೀಗ ಪುನಃ ಚಾರ್ಮಿನಾರ್‌ನಲ್ಲಿ ಪ್ರಾರ್ಥನೆಗೆ ಅವಕಾಶ ನೀಡುವಂತೆ ಭಾರತೀಯ ಪುರಾತತ್ವ ಇಲಾಖೆ ಮತ್ತು ಸಂಸ್ಕೃತಿ ಸಚಿವಾಲಯಕ್ಕೆ ಮನವಿ ಮಾಡಿರುವುದಾಗಿ ರಶೀದ್ ಖಾನ್ ಹೇಳಿದ್ದಾರೆ. ನಮಾಜ್‌ಗೆ ಅನುಮತಿ ನೀಡಿದರೆ ಭದ್ರತಾ ಸಮಸ್ಯೆ ಎದುರಾಗಲಿದೆ ಎಂದು ಕೇಂದ್ರ ಸಚಿವ ಕಿಶನ್ ರೆಡ್ಡಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸಹಿ ಅಭಿಯಾನದ ಮೂಲಕ ತೆಲಂಗಾಣ ಸಿಎಂಗೆ ಮನವಿ ಸಲ್ಲಿಸುತ್ತೇವೆ, ಬಗೆಹರಿಸದಿದ್ದರೆ ಪ್ರಗತಿ ಭವನದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ರಶೀದ್‌ ಖಾನ್‌ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಭಾಗ್ಯಲಕ್ಷ್ಮಿ ದೇವಸ್ಥಾನದ ಬಗ್ಗೆ ಪ್ರಸ್ತಾಪಿಸಿದ ರಶೀದ್ ಖಾನ್ ನಾವು ಗಂಗಾ ಜಮುನಾ ತಹಜೀಬ್ ಅನ್ನು ನಂಬುತ್ತೇವೆ ದೇವಸ್ಥಾನದಲ್ಲಿ ಪ್ರಾರ್ಥನೆ ನಡೆಯಲಿ, ಆದರೆ ಅದೇ ರೀತಿ ನಮ್ಮ ಮಸೀದಿಯನ್ನು ಮುಚ್ಚಲಾಗಿದೆ ಅದನ್ನು ತೆರೆಯಬೇಕು ಮತ್ತು ನಮಗೆ ನಮಾಜ್‌ಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ನಾಯಕರ ಸಹಿ ಅಭಿಯಾನಕ್ಕೆ ಬಿಜೆಪಿಯ ಮಾಜಿ ಎಂಎಲ್‌ಸಿ ರಾಮಚಂದ್ರರಾವ್ ಪ್ರತಿಕ್ರಿಯಿಸಿದ್ದು, ಹೈದರಾಬಾದ್‌ನಲ್ಲಿ ಕಾಂಗ್ರೆಸ್ ಪಕ್ಷವು ಮತೀಯ ಉದ್ವಿಗ್ನತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಟೀಕಿಸಿದ್ದಾರೆ. ನಗರದಲ್ಲಿ ಕೋಮುವಾದ ವಿಷಯಗಳನ್ನು ಎತ್ತಿ ಹಿಡಿಯಲು ಅವರು ಪ್ರಯತ್ನಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಲು ಮುಂದಾಗಬೇಕು ಹಾಗೂ ನಗರದಲ್ಲಿ ಕೋಮುಗಲಭೆ ಸೃಷ್ಟಿಸಿರುವ ಅವರನ್ನು ಬಂಧಿಸಬೇಕು. ಟಿಆರ್‌ಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಅಲ್ಪಸಂಖ್ಯಾತರ ಧಾರ್ಮಿಕ ಭಾವನೆಗಳನ್ನು ಕೆರಳಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!