ಹೊಸದಿಗಂತ ವರದಿ, ಹಾವೇರಿ:
ನನಗೂ ಸಿಎಂ ಆಗುವ ಇಲ್ಲವೇ ಕೆಪಿಸಿಸಿ ಅಧ್ಯಕ್ಷ ಆಗುವ ಆಸೆ ಇದೆ, ಯಾಕೆ ನಮಗೆ ಆಸೆ ಇರಬಾರದೇ. ಆದರೆ ಇದನ್ನು ಪಕ್ಷ ತೀರ್ಮಾನಿಸಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಶಿಗ್ಗಾಂವ ಉಪ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನ ರೂವಾರಿ, ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಅವರ ಶಿಗ್ಗಾಂವ ತಾಲೂಕ ಹುಲಗೂರಿನ ಮನೆಗೆ ಭೇಟಿ ನೀಡಿ ಮಾದ್ಯಮಗಳ ಜತೆ ಮಾತನಾಡಿದ ಅವರು, ಸಿಎಂ ಆಗಲಿಕ್ಕೆ ಆಸೆ ಇದೆ, ಕೆಪಿಸಿಸಿ ಅಧ್ಯಕ್ಷ ಆಗಲಿಕ್ಕೆ ಆಸೆ ಇದೆ, ಮಂತ್ರಿ ಆಗಲಿಕ್ಕೂ ಆಸೆ ಇದೆ. ಆದರೆ ಅಂತಿಮವಾಗಿ ಈ ಬಗ್ಗೆ ಪಕ್ಷ ತೀರ್ಮಾನ ಮಾಡಲಿ. ಪಕ್ಷದ ತೀರ್ಮಾನವೇ ಅಂತಿಮ ಎಂದರು.
ಈ ಹಿಂದೆ ಸಿಎಂ ಆಗ್ತಾರೆ ಅಂತ ಹೇಳಿ ಹೆಸರು ಓಡಾಡುತ್ತಿತ್ತು. ಈಗ ಕೆಪಿಸಿಸಿ ಅಧ್ಯಕ್ಷ ಆಗುತ್ತಾರೆ ಅಂತ ಹೆಸರು ಓಡಾಡುತ್ತಿದೆ. ಇದು ನಮ್ಮ ಉತ್ಸಾಹ ಅಷ್ಟೆ, ಆದರೆ ಅಂತಿಮವಾಗಿ ಪಕ್ಷ ತೀರ್ಮಾನ ಮಾಡಬೇಕು. ನಾವೆಲ್ಲಾ ಕಾದು ನೋಡಬೇಕು ಅಷ್ಟೆ, ಈ ವಿಚಾರವಾಗಿ ನಾನು ಯಾವುದೇ ರೀತಿ ಒತ್ತಡ ಹಾಕಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದ್ದೇವೆ, ತೃಪ್ತಿ ಇದೆ. ಈಗ ಮಂತ್ರಿಯಾಗಿ ಕೆಲಸ ಮಾಡುತ್ತಾ ಇದ್ದೆವೆ. ನಮ್ಮ ಕೆಲಸದ ಬಗ್ಗೆ ನಮಗೆ ತೃಪ್ತಿ ಇದೆ ಎಂದರು.