ಹೊಸದಿಗಂತ ವರದಿ, ವಿಜಯಪುರ:
ನನಗೇನು ಅಧ್ಯಕ್ಷನಾಗುವುದು, ಮುಖ್ಯಮಂತ್ರಿ ಆಗುವ ಹುಚ್ಚಿಲ್ಲ. ಪಕ್ಷಕ್ಕೆ ಒಳ್ಳೆಯದಾಗುತ್ತೆ ಎಂದು ಮಾಡುತ್ತಿರುವೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದಲ್ಲಿ ಇಂಟಲಿಜೆನ್ಸ್ ಇದೆ. ಭ್ರಷ್ಟಾಚಾರ ಯಾರ್ಯಾರು ಮಾಡಿದ್ದಾರೆ, ಯಾರು ಡುಪ್ಲಿಕೇಟ್ ಸಹಿ ಮಾಡಿದ್ದಾರೆ. ಅಪ್ಪನನ್ನೆ ಯಾರು ಜೈಲಿಗೆ ಕಳುಹಿಸಿದ್ದಾರೆ ಎಂಬುದು ಹೈ ಕಮಾಂಡ್ ಗೆ ಗೊತ್ತಿದೆ ಎಂದರು.
ವಂಶವಾದ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಸಂಪೂರ್ಣವಾದ ಬೆಂಬಲ ಇದೆ. ಇಂತಹ ವಂಶವಾದ, ಭ್ರಷ್ಟಾಚಾರದ ವ್ಯಕ್ತಿಯನ್ನು ತಕ್ಷಣ ಕಿತ್ತೊಗೆಯಬೇಕು ಎಂದು ಪ್ರಧಾನಿಯವರಲ್ಲಿ ಆಗ್ರಹಿಸುವೆ ಎಂದರು.
ದೆಹಲಿ ಬುಲಾವ್ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಇಡೀ ಗುಂಪಿಗೆ ಕರೆದರೆ ನಾನು ಹೋಗುವೆ. ಎಲ್ಲಿಯಾದರೂ ಯತ್ನಾಳ್ ಒಬ್ಬನೇ ಕರೆದು ಅವನಿಗೆ ಒಳಗೆ ಕೂಡಿಸಿ ಆಸೆ ಹಚ್ಚಿ ಪ್ರಧಾನಿ ಮಾಡುತ್ತೇವೆ ಎಂದರೆ ನಾನು ಕೇಳಲ್ಲ ಎಂದರು.
ನಾವು ಎಕ್ಷನ್ ತಗೆದುಕೊಳ್ಳುತ್ತೇವೆ ಎಂದರೆ ಅವರಿಗೆ ಅಧಿಕಾರ ಇದೆ ಅವರು ಮಾಡಬಹುದು ಎಂದರು.
ವಿ. ಸೋಮಣ್ಣ ಅವರನ್ನು ರಾಜ್ಯ ರಾಜಕಾರಣಕ್ಕೆ ಹೊಂದಾಣಿಕೆಗೆ ಕರೆತರುವ ವಿಚಾರ ಬಗ್ಗೆ, ಸೊಮಣ್ಣ ಬಂದರೆ ಉತ್ತರ ಕರ್ನಾಟಕಕ್ಕೆ ನಮ್ಮ ಸಹಾಯ ಬೇಕೆ ಅಲ್ಲವೇ, ವಿಜಯೇಂದ್ರನ ಮೇಲೆ ಸೊಮಣ್ಣನನ್ನು ಮಾಡುತ್ತಾರೇನು ?, ಸೋಮಣ್ಣನನ್ನು ಕೆಡವಲು ಅಪ್ಪ ಮಕ್ಕಳು ಎಷ್ಟು ದುಡ್ಡು ಕಳಸಿದ್ದಾರೆ ಅವರನ್ನೇ ಕೇಳಿ ಎಂದು ದೂರಿದರು.
ಚಂದ್ರಶೇಖರ ಸ್ವಾಮಿ ವಿರುದ್ಧ ಎಫ್ ಐ ಆರ್ ದಾಖಲು ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ತಪ್ಪು, ಒಕ್ಕಲಿಗ ಸ್ವಾಮೀಜಿ ಅವರು. ಈ ದೇಶದ ಅನ್ನ ತಿಂದು, ನೀರು ಕುಡಿದು ಪಾಕಿಸ್ತಾನಕ್ಕೆ ಹುಟ್ಟಿದ ಹಾಗೆ ಮಾತನಾಡುತ್ತಾರಲ್ಲ ಅದಕ್ಕೆ ಹಾಗೆ ಹೇಳಿದ್ದಾರೆ ಎಂದರು.
ಪಾಕಿಸ್ತಾನದಲ್ಲಿ ಹಿಂದೂಗಳಿಗೆ ಮತದಾನದ ಹಕ್ಕಿದೆಯಾ ?, ಹಿಂದೂಗಳಿಗೆ, ಕ್ರಿಶ್ಚಿಯನ್ ನವರಿಗೆ ಪಾಕಿಸ್ತಾನದಲ್ಲಿ ಮತದಾನದ ಹಕ್ಕಿಲ್ಲ, ಅಪಘಾನಿಸ್ತಾನದಲ್ಲಿ ಇಲ್ಲ, ಹೀಗಾಗಿ ಸ್ವಾಮಿಗಳು ಪ್ರಶ್ನೆ ಮಾಡಿದ್ದಾರೆ. ಹಿಂದೂಗಳ ಪರವಾಗಿ ಪ್ರಶ್ನೆ ಮಾಡಿದ್ದಕ್ಕೆ ಸ್ವಾಮೀಜಿಗಳಿಗೆ ಅಭಿನಂದನೆ ಸಲ್ಲಿಸುವೆ. ಅವರ ಪ್ರಕರಣ ವಾಪಸ್ ಪಡೆಯಬೇಕು, ಇರದಿದ್ದರೆ ಇಡೀ ವಕ್ಕಲಿಗ ಸಮುದಾಯ ಸರ್ಕಾರವನ್ನು ಕೇಳಬೇಕು, ಡಿ.ಕೆ. ಶಿವಕುಮಾರ್ ಈ ವಿಚಾರವಾಗಿ ಮಾತನಾಡಲಿ ಎಂದರು.