November 19, 2026
Thursday, November 19, 2026
spot_img

‘ನನಗೀಗ 80 ವರ್ಷ, ಮೊದಲಿನಂತೆ ಓಡಾಡಲು ಆಗುತ್ತಿಲ್ಲ’: ಮುಂದಿನ ಚುನಾವಣೆಗೆ ಸ್ಪರ್ಧಿಸಲ್ಲ ಎಂದ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಯೋಸಹಜ ಕಾರಣಗಳು ಹಾಗೂ ಚುನಾವಣಾ ಪ್ರಚಾರಕ್ಕಾಗಿ ಓಡಾಡಲು ಆಗುತ್ತಿರುವ ದೈಹಿಕ ಕಷ್ಟಗಳಿಂದಾಗಿ ತಾವು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈ ವಯಸ್ಸಿನಲ್ಲಿ ಇನ್ನೇನು ಹೇಳಲು ಸಾಧ್ಯ? ನನಗೀಗ 80 ವರ್ಷ ವಯಸ್ಸಾಗಿದೆ. ಮೊದಲಿನಂತೆ ಎಲ್ಲಾ ಕಡೆ ಓಡಾಡಲು ಕಷ್ಟವಾಗುತ್ತಿದೆ. ಅಭಿಮಾನಿಗಳು ಮತ್ತು ಬೆಂಬಲಿಗರು ಚುನಾವಣೆಗೆ ನಿಲ್ಲುವಂತೆ ಒತ್ತಾಯಿಸುತ್ತಿದ್ದರೂ, ವಯಸ್ಸಾದ ಕಾರಣಕ್ಕೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ” ಎಂದರು.

ಪಕ್ಷದಲ್ಲಿ ಕಡೆಗಣನೆ ಇಲ್ಲ: ಎಚ್‌ಡಿಕೆ ಆರೋಪಕ್ಕೆ ತಿರುಗೇಟು

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಬಿಡುಗಡೆ ಸಮಾರಂಭದಲ್ಲಿ ಸಿದ್ದರಾಮಯ್ಯ 5ನೇ ಸಾಲಿನಲ್ಲಿ ಕುಳಿತಿದ್ದ ವಿಚಾರ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಈ ಬೆನ್ನಲ್ಲೇ, ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದರು. ಈ ಆರೋಪವನ್ನು ತಳ್ಳಿಹಾಕಿದ ಸಿದ್ದರಾಮಯ್ಯ, ಪಕ್ಷದಲ್ಲಿ ತಮ್ಮನ್ನು ಯಾರೂ ಕಡೆಗಣಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಜೊತೆ ಭಿನ್ನಾಭಿಪ್ರಾಯವಿಲ್ಲ: ಸಿಎಂ

ಮತ್ತೊಂದೆಡೆ, ತಮ್ಮ ಮತ್ತು ಸಿದ್ದರಾಮಯ್ಯ ನಡುವೆ ಮುನಿಸು ಇದೆ ಎಂಬ ಊಹಾಪೋಹಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೆರೆ ಎಳೆದಿದ್ದಾರೆ. ಬೆಂಗಳೂರಿನ ಮೇಖ್ರಿ ಸರ್ಕಲ್ ಮತ್ತು ಟೌನ್ ಹಾಲ್ ಬಳಿ ಮಾತನಾಡಿದ ಅವರು, “ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ನನ್ನ ನಡುವೆ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಕೆಲವರು ನಮ್ಮಿಬ್ಬರ ನಡುವೆ ಬಿರುಕಿದೆ ಎಂಬ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿದ್ದಾರೆ” ಎಂದು ಹೇಳಿದರು.

ಇದನ್ನೂ ಓದಿ:

“ರಾಜಕೀಯದಲ್ಲಿ ಟೀಕಾಕಾರರು ಮತ್ತು ವಿರೋಧಿಗಳು ಇರಲೇಬೇಕು, ಆಗಲೇ ನಾವು ಸ್ವಚ್ಛ ರಾಜಕಾರಣ ಮಾಡಲು ಸಾಧ್ಯ. ಸಿದ್ದರಾಮಯ್ಯ ನಮ್ಮ ನಾಯಕರು. ಮಹಾಸ್ವಾಮೀಜಿ ಸೇರಿದಂತೆ ಕೆಲವರು ಮಾಧ್ಯಮಗಳಲ್ಲಿ ಇದನ್ನು ಬೇರೆ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಈ ವಿಚಾರವಾಗಿ ಅವರಿಗೆ ಏನು ಹೇಳಬೇಕೋ ಅದನ್ನು ಈಗಾಗಲೇ ತಿಳಿಸಿದ್ದೇವೆ” ಎಂದು ಡಿಕೆಶಿ ಹೇಳಿದರು. ಅಲ್ಲದೆ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಚರ್ಚಿಸಲು ಮತ್ತು ಹಬ್ಬದ ಶುಭಾಶಯ ಕೋರಲು ಇತ್ತೀಚೆಗೆ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾಗಿ ತಿಳಿಸಿದರು.

ಜನಪರ ಹೋರಾಟ ನಿರಂತರ

2028ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸಿದ್ದರಾಮಯ್ಯ ಈ ಹಿಂದೆಯೇ ಘೋಷಿಸಿದ್ದರು. ವಯಸ್ಸಿನ ಕಾರಣದ ಜೊತೆಗೆ “ರಾಜಕೀಯ ತೀವ್ರವಾಗಿ ಕಲುಷಿತಗೊಂಡಿದೆ” ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದರು. ಆದಾಗ್ಯೂ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸದಸ್ಯರಾಗಿರುವ ಅವರು, ತಾವು ಸಕ್ರಿಯ ರಾಜಕಾರಣದಲ್ಲೇ ಇರುವುದಾಗಿ ಮತ್ತು ಜನಸಾಮಾನ್ಯರ ಕಷ್ಟಗಳು ಹಾಗೂ ಹಿತಾಸಕ್ತಿಗಳ ಪರವಾಗಿ ಸದಾ ಧ್ವನಿ ಎತ್ತುವುದಾಗಿ ತಿಳಿಸಿದ್ದಾರೆ.

Must Read

Skip to toolbar