ನಾನು ರೈತನ ಮಗ, ಸಾಯುತ್ತೇನೆಯೇ ಹೊರತು ತಲೆಬಾಗುವುದಿಲ್ಲ: ಪ್ರತಿಪಕ್ಷಗಳ ವಿರುದ್ಧ ಧನಕರ್ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷಗಳ ಅವಿಶ್ವಾಸ ಗೊತ್ತುವಳಿ ವಿಚಾರವಾಗಿ ರಾಜ್ಯಸಭೆಯಲ್ಲಿ ಭಾರೀ ಗದ್ದಲ ಉಂಟಾಗಿದೆ.

ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯದ ಕುರಿತು ಸಭಾಪತಿ ಜಗದೀಪ್ ಧನಕರ್ ಮತ್ತು ಮಲ್ಲಿಕಾರ್ಜುನ ಖರ್ಗೆ ನಡುವೆ ತೀವ್ರ ವಾಗ್ವಾದ ನಡೆಯಿತು.

ರಾಜ್ಯಸಭೆಯಲ್ಲಿ ಪ್ರಮೋದ್ ತಿವಾರಿ ಮಾತನಾಡುತ್ತಿದ್ದಾಗ ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಕಿಡಿಕಾರಿದರು. ಪ್ರಮೋದ್ ತಿವಾರಿ ಅವರನ್ನು ತರಾಟೆಗೆ ತೆಗೆದುಕೊಂಡ ಸಭಾಪತಿ, ‘ನಾನು ರೈತನ ಮಗ, ಸಾಯುತ್ತೇನೆಯೇ, ಹೊರತು ತಲೆಬಾಗುವುದಿಲ್ಲ’ ಎಂದು ಕಡ್ಡಿ ಮುರಿದಂತೆ ಹೇಳಿದರು. ಈ ವೇಳೆ ರಾಜ್ಯಸಭೆಯಲ್ಲಿ ಮತ್ತೆ ಕೋಲಾಹಲ ಉಂಟಾಯಿತು.

ಶುಕ್ರವಾರ ರಾಜ್ಯಸಭೆಯಲ್ಲಿ ಸದನದ ಕಲಾಪ ಆರಂಭವಾದ ಕೂಡಲೇ ಪ್ರತಿಪಕ್ಷಗಳು ಮತ್ತು ಸಭಾಪತಿ ಜಗದೀಪ್ ಧನಕರ್ ನಡುವೆ ತೀವ್ರ ವಾಗ್ವಾದ ನಡೆಯಿತು. ಪ್ರಮೋದ್ ತಿವಾರಿ ಅವರು ಅವಿಶ್ವಾಸ ನಿರ್ಣಯದ ಬಗ್ಗೆ ಪ್ರಸ್ತಾಪಿಸಿದಾಗ,ಸಭಾಪತಿ ಜಗದೀಪ್ ಧನಕರ್ ಮಾತನಾಡಿ, ‘ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದು ಪ್ರತಿಪಕ್ಷಗಳ ಸಾಂವಿಧಾನಿಕ ಹಕ್ಕು. ಆದರೆ ಅದನ್ನೇ ಪ್ರಚಾರ ಮಾಡಿದ್ದೀರಿ. ನಾನೊಬ್ಬ ರೈತನ ಮಗ, ದೌರ್ಬಲ್ಯ ತೋರುವುದಿಲ್ಲ. ನಾನು ದೇಶಕ್ಕಾಗಿ ಸಾಯುತ್ತೇನೆ, ನಿಮಗೆ 24 ಗಂಟೆಗಳ ಕಾಲ ಒಂದೇ ಕೆಲಸವಿದೆ. ರೈತನ ಮಗ ಇಲ್ಲಿ ಯಾಕೆ ಕುಳಿತಿದ್ದಾನೆ? ನಾನು ನನ್ನ ಕಣ್ಣುಗಳಿಂದ ನೋಡುತ್ತಿದ್ದೇನೆ. ನಾನು ನೋವು ಅನುಭವಿಸುತ್ತಿದ್ದೇನೆ. ದಯವಿಟ್ಟು ಯೋಚಿಸಿ. ಗೌರವ ಕೊಡುವ ವಿಚಾರದಲ್ಲಿ ನಾನು ಯಾವುದೇ ಅಪಮರ್ಯಾದೆ ಮಾಡಿಲ್ಲ’ ಎಂದು ಹೇಳಿದರು.

ನಾನು ಸಾಕಷ್ಟು ಸಹಿಸಿಕೊಂಡಿದ್ದೇನೆ. ಇಂದಿನ ರೈತ ಕೃಷಿಗೆ ಮಾತ್ರ ಸೀಮಿತವಾಗಿಲ್ಲ. ಇಂದಿನ ರೈತ ಎಲ್ಲೆಡೆ ದುಡಿಯುತ್ತಿದ್ದಾನೆ. ಸರ್ಕಾರಿ ಕೆಲಸವೂ ಇದೆ. ಉದ್ಯಮವಿದೆ. ನೀವು ಪ್ರಸ್ತಾಪವನ್ನು ತರುತ್ತೀರಿ, ಅದು ನಿಮ್ಮ ಹಕ್ಕು. ಪ್ರಸ್ತಾವನೆಯನ್ನು ಚರ್ಚಿಸುವುದು ನಿಮ್ಮ ಹಕ್ಕು. ನೀವು ಏನು ಮಾಡಿದ್ದೀರಿ, ನೀವು ಸಂವಿಧಾನವನ್ನು ತುಂಡು ಮಾಡಿದ್ದೀರಿ. ನಿಮ್ಮ ಪ್ರಸ್ತಾಪವನ್ನು ಯಾರು ನಿಲ್ಲಿಸಿದ್ದಾರೆ? ಕಾನೂನು ಓದಿ. ನಿಮ್ಮ ಪ್ರಸ್ತಾವನೆ ಬಂದಿದೆ. 14 ದಿನಗಳ ನಂತರ ಬರಲಿದೆ. ಪ್ರಮೋದ್ ತಿವಾರಿ ಜೀ, ನೀವು ಅನುಭವಿ ನಾಯಕ. ನೀವು ಏನುವಿಷಯದ ಬಗ್ಗೆ ಮಾತನಾಡಿದ್ದೀರಿ ಎಂಬುದನ್ನು ಕಂಡುಕೊಳ್ಳಿ’ ಎಂದು ಕಿಡಿಕಾರಿದರು.

ಇದಾದ ಬಳಿಕ ಸಭಾಪತಿ ಜಗದೀಪ್ ಧನಕರ್ ಅವರು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ತಮ್ಮ ಚೇಂಬರ್‌ಗೆ ಕರೆಸಿಕೊಂಡರು.

‘ನಾನು ರೈತನ ಮಗ, ಸಾಯುತ್ತೇನೆಯೇ, ಹೊರತು ತಲೆಬಾಗುವುದಿಲ್ಲ’ ಎಂಬ ಜಗದೀಪ್ ಧನಕರ್ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ನೀವು ರೈತನ ಮಗನಾಗಿದ್ದರೆ ನಾನೂ ಕೂಡ ಕೂಲಿಕಾರನ ಮಗ ಎಂದು ಹೇಳಿದರು. ಸದನ ನಡೆಸುವುದು ನಿಮ್ಮ (ಸ್ಪೀಕರ್) ಜವಾಬ್ದಾರಿ. ನೀವು ಸದನವನ್ನು ಚೆನ್ನಾಗಿ ಮತ್ತು ಸಂಪ್ರದಾಯದಂತೆ ನಡೆಸುತ್ತೀರಿ. ನಿಮ್ಮ ಹೊಗಳಿಕೆ ಕೇಳಲು ನಾವು ಇಲ್ಲಿಗೆ ಬಂದಿಲ್ಲ. ಎಲ್ಲರಿಗೂ ಮಾತನಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಇದಾದ ಬಳಿಕ ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಅವರು ರಾಜ್ಯಸಭಾ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!