ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದು, ರಾಜಕೀಯ ಪಕ್ಷಗಳು ರಣತಂತ್ರ ರೂಪಿಸುತ್ತಿದ್ದು, ಕಾಂಗ್ರೆಸ್ನ ಹಿರಿಯ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ದಿಗ್ವಿಜಯ್ ಸಿಂಗ್ (Digvijaya Singh) ಅವರು ನಾನು ಸನಾತನ ಧರ್ಮವನ್ನು ಪಾಲಿಸುತ್ತೇವೆ ಎಂಬ ಹೇಳಿಕೆ ನೀಡಿದ್ದಾರೆ.
ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ, ನಾನು ಸನಾತನ ಧರ್ಮವನ್ನು ಅನುಸರಿಸುತ್ತೇನೆ. ನಾನು ಉತ್ತಮ ಹಿಂದು. ಆದಾಗ್ಯೂ, ಚುನಾವಣೆಗಳಲ್ಲಿ ಧರ್ಮದ ಬಳಕೆಯನ್ನು ನಿಷೇಧಿಸುವುದು ಉತ್ತಮ ಎಂಬುದಾಗಿ ನುಡಿದಿದ್ದಾರೆ.
ಜತೆಗೆ ನಾನು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ 1.11 ಲಕ್ಷ ರೂಪಾಯಿ ದೇಣಿಗೆ ನೀಡಿದ್ದೇನೆ ಎಂಬುದಾಗಿ ಹೇಳಿಕೊಂಡಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ ಶಿವರಾಜ್ ಸಿಂಗ್ ಚೌಹಾಣ್ 1 ಲಕ್ಷ ರೂಪಾಯಿ ನೀಡಿದ್ದರೆ, ನಾನು 1.11 ಲಕ್ಷ ರೂಪಾಯಿ ನೀಡಿದ್ದೇನೆ. ಟ್ರಸ್ಟ್ಗೆ ಸಲ್ಲಿಸಲು ನಾನು ಆ ಚೆಕ್ ಅನ್ನು ಪಿಎಂ ಮೋದಿ ಅವರಿಗೆ ಕಳುಹಿಸಿದ್ದೆ. ಅವರು ಅದನ್ನು ಹಿಂದಕ್ಕೆ ಕಳುಹಿಸಿದ್ದರು ಮತ್ತು ಅದನ್ನು ನಾನೇ ಸಲ್ಲಿಸುವಂತೆ ಸಲಹೆ ಕೊಟ್ಟರು. ನಾನು ಅದನ್ನು ಸಲ್ಲಿಸಿದ್ದೇನೆ ಎಂದು ಸಿಂಗ್ ತಿಳಿಸಿದ್ದಾರೆ.
ನವೆಂಬರ್ 17 ರಂದು ನಡೆಯಲಿರುವ ಚುನಾವಣೆಯಲ್ಲಿ ಮಧ್ಯಪ್ರದೇಶದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. 2020ರಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಂಡ ನಂತರ ಕೇಸರಿ ಪಕ್ಷ ಅಧಿಕಾರಕ್ಕೆ ಬಂದಿತ್ತು. ಡಿಸೆಂಬರ್ 3ರಂದು ಮತ ಎಣಿಕೆ ನಡೆಯಲಿದೆ.