ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನು ಇಸ್ಲಾಮಿಕ್ ತತ್ವಗಳನ್ನು ಅನುಸರಿಸುತ್ತೇನೆ. ಉತ್ತಮ ಮುಸ್ಲಿಂ ಎಂದು ಸಾಬೀತುಪಡಿಸಲು ಹಿಜಾಬ್ ಧರಿಸುವ ಅಗತ್ಯವಿಲ್ಲ. ಹಿಜಾಬ್ ಧರಿಸುವುದು ಅಥವಾ
ಧರಿಸದಿರುವುದು ಅವರ ಧರ್ಮದಲ್ಲಿ ನಂಬಿಕೆಯನ್ನು ವ್ಯಾಖ್ಯಾನಿಸುವುದಿಲ್ಲ ಎಂದು ಕಾಶ್ಮೀರದಲ್ಲಿ 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಅಗ್ರಸ್ಥಾನ ಗಳಿಸಿರುವ ಅರೂಸಾ ಪರ್ವೈಜ್ ಹೇಳಿದ್ದಾರೆ.
12 ನೇ ತರಗತಿಯಲ್ಲಿ ಟಾಪರ್ ಆಗಿರುವ ಅರೂಸಾ ಪರ್ವೇಜ್ ಅವರನ್ನು ಹಿಜಾಬ್ ಧರಿಸದೇ ಇರುವುದರಿಂದ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿದ್ದು, ಇದಕ್ಕೆ ಅರೂಸಾ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.
ಅರೂಸಾ, ಹಿಜಾಬ್ ಧರಿಸಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅವರ ಫಾಲೋವರ್ಸ್ ಶೇರ್ ಮಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಲಾಗಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಅಲ್ಲಾನಲ್ಲಿ ನಂಬಿಕೆ ಹೊಂದಿದ್ದೇನೆ ಮತ್ತು ಇಸ್ಲಾಮಿಕ್ ತತ್ವಗಳನ್ನು ಅನುಸರಿಸುತ್ತೇನೆ. ನಾನು ಉತ್ತಮ ಮುಸ್ಲಿಂ ಎಂದು ಸಾಬೀತುಪಡಿಸಲು ನಾನು ಹಿಜಾಬ್ ಧರಿಸುವ ಅಗತ್ಯವಿಲ್ಲ ಹೇಳಿದ್ದಾರೆ. ನೀವು ಟ್ರೋಲ್ ಮಾಡುವುದಕ್ಕಿಂತ ಹೆಚ್ಚಾಗಿ ನಾನು ಅಲ್ಲಾನನ್ನು ಪ್ರೀತಿಸುತ್ತೇನೆ. ನಾನು ಹೃದಯದಿಂದ ಮುಸ್ಲಿಂ, ಹಿಜಾಬ್‌ನಿಂದ ಅಲ್ಲ’ ಎಂದು ಪೋಸ್ಟ್ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಎಲ್ಲಾಹಿಬಾಗ್ ಪ್ರದೇಶದವರಾದ ಪರ್ವೈಜ್ ವಿಜ್ಞಾನ ವಿಭಾಗದಲ್ಲಿ 500ಕ್ಕೆ 499 ಅಂಕಗಳನ್ನು (ಶೇ 99.80) ಗಳಿಸಿ ಅತ್ಯುನ್ನತ ಸ್ಥಾನದಲ್ಲಿ ತೇರ್ಗಡೆಯಾದವರು. ಶ್ರೀನಗರದ ಡೆಪ್ಯುಟಿ ಕಮಿಷನರ್ ಮೊಹಮ್ಮದ್ ಐಜಾಜ್ ಅಸದ್ ಅವರು ತಮ್ಮ ಕಚೇರಿ ಕೊಠಡಿಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಿದ್ದರು.