ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹಾಗೂ ಕುಟುಂಬಸ್ಥರ ವಿರುದ್ಧ ಭೂ ಒತ್ತುವರಿಯ ಗಂಭೀರ ಆರೋಪ ಕೇಳಿ ಬಂದಿದ್ದು, ಭೂ ಒತ್ತುವರಿ ತೆರವು ಮಾಡುವಂತೆ ಹೈಕೋರ್ಟ್ ಹೇಳಿತ್ತು. ಈ ಹಿನ್ನೆಲೆ ಇಂದು ಕಂದಾಯ ಇಲಾಖೆ ಹಾಗೂ ಸರ್ವೇ ಇಲಾಖೆಯ ಜಂಟಿ ಸರ್ವೇಯಲ್ಲಿ ತೆರವು ಕಾರ್ಯಾಚರಣೆ ಆರಂಭವಾಗಿದೆ.
ಬಿಡದಿ ಕೇತಗಾನಹಳ್ಳಿಯ ಸರ್ವೇ ನಂಬರ್ 7, 8, 9,10, 16, 17 ಹಾಗೂ 79ರಲ್ಲಿ ಸರ್ವೇ ಕಾರ್ಯ ನಡೆಸಿದ್ದ ಅಧಿಕಾರಿಗಳು ಇದರಲ್ಲಿ 14 ಎಕರೆಗೂ ಹೆಚ್ಚು ಒತ್ತುವರಿ ಆಗಿರುವ ಬಗ್ಗೆ ವರದಿ ನೀಡಿದರು. ಅದರಲ್ಲಿ ಕುಮಾರಸ್ವಾಮಿ ಒಡೆತನದ ಸರ್ವೇ ನಂಬರ್ 7 ಹಾಗೂ 8 ಸೇರಿ ಇತರರಿಗೆ ಸೇರಿದ ಸರ್ವೇ ನಂಬರ್‌ಗಳಲ್ಲೂ ಒಟ್ಟು 14 ಎಕರೆಗೂ ಅಧಿಕ ಭೂಮಿ ಒತ್ತುವರಿ ಆಗಿದೆ.
ಕುಮಾರಸ್ವಾಮಿ ತೋಟದ ಮನೆ ಒಳಗೆ ಮಾರ್ಕಿಂಗ್ ಕಾರ್ಯ ಮುಗಿಸಿದ ಸರ್ವೇ ಅಧಿಕಾರಿಗಳು ಬಳಿಕ ತೋಟದ ಸುತ್ತಲೂ ಒತ್ತುವರಿ ಮಾರ್ಕಿಂಗ್ ಮಾಡಿ ರೆಡ್ ಫ್ಲಾಗ್ ಹಾಕಿದ್ದಾರೆ. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಮಾರ್ಕಿಂಗ್ ಮಾಡಿ ಅಳತೆ ಕಲ್ಲುಗಳ ಅಳವಡಿಕೆ ಮಾಡ್ತಿರೋ ಅಧಿಕಾರಿಗಳು ಬಳಿಕ ಜೆಸಿಬಿಗಳ ಮೂಲಕ ಒತ್ತುವರಿ ಜಾಗ ತೆರವು ಮಾಡಿ ತಂತಿಬೇಲಿ ಅಳವಡಿಸಲಿದ್ದಾರೆ.
ಕೇಂದ್ರ ಸಚಿವ ಕುಮಾರಸ್ವಾಮಿ ಏನಂದ್ರು?
ಒತ್ತುವರಿ ತೆರವಿನ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದು 40 ವರ್ಷಗಳ ಹಿಂದೆ ನಾನು ಕಾನೂನು ಬದ್ಧವಾಗಿ ತೆಗೆದುಕೊಂಡಿರುವ ಜಮೀನು. ಯಾರು ಏನು ಗಾಬರಿಯಾಗಬೇಕಿಲ್ಲ. ಕಾನೂನು ವ್ಯಾಪ್ತಿಯಲ್ಲಿ ಹೋರಾಟ ಮಾಡುತ್ತೇನೆ. ನಾನು ನನ್ನ ಜೀವನದಲ್ಲಿ ಯಾವುದೇ ಅಕ್ರಮಗಳಿಗೆ ಎಡೆಮಾಡಿಕೊಟ್ಟಿಲ್ಲ ಎಂದಿದ್ದಾರೆ.
ನಾನು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ. ಆದರೆ ಈ ಸರ್ಕಾರ ದಬ್ಭಾಳಿಕೆ ನಡೆಸುತ್ತಿದೆ. ನಾನು ಒಬ್ಬ ರೈತನಾಗಿ ಬದುಕಲು 40 ವರ್ಷಗಳ ಹಿಂದೆ ಜಮೀನು ತೆಗೆದುಕೊಂಡಿದ್ದೇನು. ಒಬ್ಬ ಸಾಮಾನ್ಯ ಪ್ರಜೆಗೆ ಯಾವುದೇ ಒತ್ತುವರಿ ತೆರವು ಮಾಡಬೇಕು ಎಂದರೆ 15 ದಿನಗಳ ಮುಂಚೆ ನೋಟಿಸ್ ನೀಡಬೇಕು. ಆದರೆ ನನಗೆ ಈವರೆಗೆ ಯಾರು ಸಂಪರ್ಕ ಮಾಡಿಲ್ಲ.
ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ನಾನೇ ಟಾರ್ಗೆಟ್ ಅಗಿದ್ದೇನೆ. ನನ್ನ ಬಿಟ್ಟರೆ ಯಾರು ಇಲ್ಲ ಈ ಸರ್ಕಾರಕ್ಕೆ. ಸದ್ಯ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. 40 ವರ್ಷದ ಹಿಂದೆ ತೆಗೆದುಕೊಂಡ ಭೂಮಿಗೆ ನೂರು ಬಾರಿ ತನಿಖೆಯಾಗಿದೆ. ನನ್ನ ಪರಿಸ್ಥಿತಿಯೇ ಹೀಗಾದರೆ ಜನ ಸಾಮಾನ್ಯರ ಪರಿಸ್ಥಿತಿ ಹೇಗಿರಬಹುದು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.