ಶಕ್ತಿಧಾಮದ ಮಕ್ಕಳ ಸಹಾಯಕ್ಕೆ ನಾನು ಎಂದಿಗೂ ಸಿದ್ದ‌: ನಟ ವಿಶಾಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಪುನೀತ್ ರಾಜ್ ಕುಮಾರ್ ಅವರ ಕನಸಿನ ಅನಾಥ ಮಕ್ಕಳ ಮತ್ತು ಮಹಿಳೆಯರ ಆಶಾಕಿರಣವಾಗಿರುವ ಶಕ್ತಿಧಾಮದ ಮಕ್ಕಳನ್ನು ಪುನೀತ್ ನಿಧನರಾದ ಬಳಿಕ ಜವಾಬ್ದಾರಿಯನ್ನು ತಾವು ಹೊತ್ತುಕೊಳ್ಳುವುದಾಗಿ ತಮಿಳು ನಟ ವಿಶಾಲ್ ತಿಳಿಸಿದ್ದರು.

ಇದೀಗ ಮತ್ತೆ ವಿಶಾಲ್ ಈ ಕುರಿತು ಮಾತನಾಡಿದ್ದಾರೆ. ‘ಶಕ್ತಿಧಾಮದ ಮಕ್ಕಳ ವಿಚಾರದಲ್ಲಿ‌ ಸಹಾಯ ಮಾಡಲು ನಾನು ಎಂದಿಗೂ ಸಿದ್ದ‌. ಆದ್ರೆ ಯಾವ ರೀತಿ ಸಹಾಯ ಬೇಕು ಎಂಬುದರ ಬಗ್ಗೆ ಡಾ.ರಾಜ್ ಕುಟುಂಬದಿಂದ ಅಧಿಕೃತ ಮಾಹಿತಿ ಬಂದಿಲ್ಲ. ಅವರು ಅಧಿಕೃತವಾಗಿ ಹೇಳಿದರೆ ನಾನು‌ ಯಾವ ಸಹಾಯಕ್ಕೂ ಸಿದ್ದ. ನಾನು ಶಕ್ತಿಧಾಮದ ಸ್ವಯಂ ಸೇವಕನಾಗಿ ಯಾವಾಗಲು ಇರುತ್ತೇನೆ. ಮಕ್ಕಳ ದತ್ತು ಪಡೆಯುವ ವಿಚಾರ ಇರಬಹುದು, ಶಾಲಾ ಕಟ್ಟಡ ನಿರ್ಮಾಣ ವಿಚಾರ ಇರಬಹುದು, ರಾಜ್ ಫ್ಯಾಮಿಲಿಯಿಂದ ಅನುಮತಿ ಸಿಕ್ಕರೆ ನಾನು ಎಲ್ಲಾ ಕೊಡುಗೆಗು ಸಿದ್ದ’ ಎಂದಿದ್ದಾರೆ.

ಪ್ರಕಾಶ ರೈ ಅವರು ಅಪ್ಪು ಹೆಸರಿನಲ್ಲಿ ಆಂಬ್ಯುಲೆನ್ಸ್ ಕೊಡುತ್ತಿದ್ದಾರೆ‌. ಅವರು ನನ್ನ ಬಳಿ ಈ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ಆಂಬುಲೆನ್ಸ್ ಕೊಡಿಸಲು ಸಿದ್ದ. ಸದ್ಯಕ್ಕೆ ಶಕ್ತಿಧಾಮಕ್ಕೆ ಯಾವ ಸಾಹಯವೂ ಅಗತ್ಯ ಇದ್ದಂತೆ ಇಲ್ಲ. ರಾಜ್ ಕುಟುಂಬ ಶಕ್ತಿಧಾಮವನ್ನ ಚೆನ್ನಾಗಿ ನೋಡಿಕೊಳ್ಳುತ್ತಿದೆ. ಹೊಟ್ಟೆ ತುಂಬಿದಾಗ ನಾವು ಮತ್ತೆ ಒಂದು ತುತ್ತು ತಿನ್ನಿಸಲು ಸಾಧ್ಯವಿಲ್ಲ ಎಂದರು.

ಇದೇ ವೇಳೆ ದಕ್ಷಿಣದ ಸಿನಿಮಾಗಳ ಕುರಿತು ಮಾತನಾಡಿದ ಅವರು, ‘ದಕ್ಷಿಣ ಭಾರತದ ಸಿನಿಮಾಗಳು ದೇಶದಲ್ಲಿ ದೊಡ್ಡ ಹೆಸರು ಮಾಡುತ್ತಿವೆ. ಕನ್ನಡದಲ್ಲಿ ಕೆಜಿಎಫ್ ನಂತರ ಕಾಂತಾರ ಒಳ್ಳೆಯ ಸಿನಿಮಾ. ನಾನು ಸಹ ಕಾಂತಾರ ನೋಡಿದ್ದೇನೆ. ರಿಷಬ್ ಗೆ ಕರೆ ಮಾಡಿ ಸಿನಿಮಾ ಚೆನ್ನಾಗಿ ಮಾಡಿದ್ದೀರಾ ಎಂದು ಹೇಳಿದ್ದೇನೆ. ಇಲ್ಲಿ ಸಿನಿಮಾಗಳಲ್ಲಿ ಕಲೆ, ಸಂಸ್ಕೃತಿಯನ್ನ ತೋರಿಸುತ್ತಿದ್ದೇವೆ. ಇದು ಉತ್ತರ ಭಾರತದವರಿಗೆ ಇಷ್ಟವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ದಕ್ಷಿಣ, ಉತ್ತರ ಭಾರತದ ಸಿನಿಮಾ ಅಂತೇನಿಲ್ಲ. ಎಲ್ಲವೂ ಭಾರತದ ಸಿನಿಮಾ ಎಂದರು.

ನನಗೆ ಕನ್ನಡದಲ್ಲಿ ಸಿನಿಮಾ ಮಾಡುವ ಆಸೆ ಇದೆ. ನನ್ನ ತಂದೆಗೆ ನಾನು ಕನ್ನಡದಲ್ಲಿ ಸಿನಿಮಾ ಮಾಡಬೇಕು ಎನ್ನುವುದು ದೊಡ್ಡ ಆಸೆವಿದೆ. ಕೆಲವರು ನನ್ನನ್ನು ಸಂಪರ್ಕಿಸಿದ್ದಾರೆ. ಅದನ್ನು ನಾನು ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಶೀಘ್ರದಲ್ಲೂಂತು ಕನ್ನಡ ಸಿನಿಮಾ ಅಸಾಧ್ಯ. 2024 ರ ನಂತರ ಅದು ಸಾಧ್ಯವಾಗಬಹುದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!