ಅಧಿಕಾರ ಸಿಕ್ಕಿದೆ ಎಂದು ಜನರನ್ನು ತಿನ್ನುವ ತೋಳ ನಾನಲ್ಲ: ಮುಖ್ಯಮಂತ್ರಿ ಬೊಮ್ಮಾಯಿ

ಹೊಸ ದಿಗಂತ ವರದಿ,ಬಳ್ಳಾರಿ:

ನಾಯಿ ನಿಯತ್ತಿನ ಪ್ರಾಣಿ, ಸಾಕುವವನಿಗೆ ನಿಯತ್ತಿನ ಪ್ರಾಣಿ ಅದು, ಕಳ್ಳರು ಬಂದರೇ ಮಾತ್ರ ಅದು ಬಿಡೊಲ್ಲ, ಮನೆಗೆ ಕನ್ನ ಹಾಕುವವರು ಬಂದರೇ ಬಿಡೋದೇ ಇಲ್ಲ  ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪರೋಕ್ಷವಾಗಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಮುನ್ಸಿಪಲ್ ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ 663ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ಸರ್ಕಾರದಲ್ಲಿ‌ ಮದ್ಯವರ್ತಿಗಳಿಲ್ಲ, ನೇರವಾಗಿ ಎಲ್ಲವೂ ಫಲಾನುಭವಿಗಳಿಗೆ ತಲುಪಲಿವೆ. ರಾಜ್ಯದ ಜನರ ಸೇವೆ, ರಾಜ್ಯದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವೆ, ಅಂತಹ ನಿಯತ್ತು ನಮ್ಮದು, ಕಳ್ಳರು ಒಳನುಗ್ಗಿದರೇ ಬಿಡುವ ಜಾಯಮಾನ ನಮ್ಮದಲ್ಲ. ಜನರ ಆರ್ಶಿವಾದದಿಂದ ನನಗೆ ಜನರ ಸೇವೆ ಮಾಡುವ ಈ ಸದಾವಕಾಶ ದೊರೆತಿದೆ. ಅಧಿಕಾರ ಸಿಕ್ಕಿದೆ ಎಂದು ಜನರನ್ನು ತಿನ್ನುವ ತೋಳ ನಾನಲ್ಲ, ಕೆಲವರು ನಾಯಿ‌ ನೆಪದಲ್ಲಿ ತೋಳಗಳಾಗಿದ್ದಾರೆ, ಅಂತವರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ. ನಾಯಿ ನಿಯತ್ತಿನ ಬಗ್ಗೆ ಗೊತ್ತಿದ್ದರೇ ಯಾರೂ ಪ್ರಸ್ತಾಪ ಮಾಡುತ್ತಿರಲಿಲ್ಲ, ನಾಯಿ ಯಾರು ತೋಳ ಯಾರು ಎಂಬುದು ಇಡೀ ರಾಜ್ಯದ ಜನರಿಗೆ ತಿಳಿದಿದೆ. ಬರುವ ಚುನಾವಣೆಯಲ್ಲಿ ಜನರೇ ಅಂತವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

59 ತಿಂಗಳು ಎಲ್ಲರೂ ಸೇರಿ ಪಕ್ಷಾತೀತವಾಗಿ ರಾಜ್ಯದ ಅಭಿವೃದ್ದಿಗಾಗಿ ಹಾಗೂ ಜನರಿಗೆ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸೋಣ,  ಉಳಿದ 1 ತಿಂಗಳು ಮಾತ್ದ ರಾಜಕೀಯ ಮಾಡೋಣ ಅದಕ್ಕೆ ನಾನೂ ಸಿದ್ದ, ಅದನ್ನು ಬಿಟ್ಟು ಅಧಿಕಾರದಾಸೆಗೆ ಜನರ ದಾರಿ ತಪ್ಪಿಸುವ ಕೆಲಸ ಮಾಡುವುದು ಸರಿಯಲ್ಲ. ಸಮಾಜ ಒಡೆಯುವ ಕೆಲಸ ಮಾಡಿ ಕೈ ಸುಟ್ಟುಕೊಂಡರೂ ಇನ್ನೂ ಕಾಂಗ್ರೆಸ್ ನವರಿಗೆ ಬುದ್ದಿ ಬಂದಿಲ್ಲ ಎಂದು ಕೈ ನಾಯಕರ ವಿರುದ್ಧ ವಾಗ್ದಾಳಿ‌ ನಡೆಸಿದರು.

ಬಳ್ಳಾರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ  ಕೆಎಂಆರ್ ಸಿ ಫಂಡ್ 5500 ಕೋಟಿ ರೂ.ಮೀಸಲಿದೆ. ಅದರಲ್ಲಿ 2 ಸಾವಿರ ಕೋಟಿ ಗೆ ಅನುಮೋದನೆ ದೊರೆತಿದೆ. ಎರಡನೇ ಹಂತದಲ್ಲಿ‌ಮತ್ತೆ ಬರಲಿದೆ. ಕೆಕೆಆರ್ ಡಿಬಿ ಅಡಿ ನಾನು ಮುಖ್ಯಮಂತ್ರಿ ಯಾದ ಬಳಿಕ 3 ಸಾವಿರ ಕೊಟಿ ರೂ.ಕೊಟ್ಟಿರುವೆ, ಎಲ್ಲ ಕೆಲಸಗಳು ಪ್ರಾರಂಬವಾಗಬೇಕಿದೆ. ಇದರ ಜೊತೆಗೆ ಬಜೆಟ್ ನ ಗಾತ್ರ ಈ ಬಾರಿ ದೊಡ್ಡದಿದೆ. ಅದರಲ್ಲೂ ಪಾಲು ಹೆಚ್ಚಿರಲಿದೆ. ಇದೆಲ್ಲ ಅನುದಾನದ ಸದ್ಬಳಕೆಗಾಗಿ ಎಂಜಿನೀಯರ್ ವಿಭಾಗದ ಸರ್ಕಲ್ ಕಚೇರಿ ಬಳ್ಳಾರಿಯಲ್ಲಿ ನಿರ್ಮಿಸಲಾಗುವುದು. ಇದನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದರು. ಸಚಿವ ಬಿ.ಶ್ರೀರಾಮುಲು, ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!