Wednesday, February 8, 2023

Latest Posts

ಕೊಡಗಿನಲ್ಲಿ ಸರ್ವಋತು ರಸ್ತೆ ನಿರ್ಮಾಣಕ್ಕೆ ಆದ್ಯತೆ: ಅಪ್ಪಚ್ಚುರಂಜನ್

ಹೊಸ ದಿಗಂತ ವರದಿ,ಮಡಿಕೇರಿ:

ಮಲೆ(ಳೆ)ನಾಡಾದ ಕೊಡಗಿನಲ್ಲಿ ಸರ್ವ ಋತು ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಪ್ರಸಕ್ತ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 50 ಕೋಟಿ ರೂ. ಅನುದಾನವನ್ನು ವಿನಿಯೋಗಿಸಲಾಗುತ್ತಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಪತ್ರಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿಲ್ಲೆಯ ಗಾಮೀಣ ಭಾಗಗಳಲ್ಲಿ ಸರ್ವಋತು ರಸ್ತೆಗಳಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಈ ಹಿಂದೆ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯ್ತಿಯ 400 ಕಿ.ಮೀ. ರಸ್ತೆಗಳಿದ್ದರೆ, ಇಂದು 2 ಸಾವಿರ ಕಿ.ಮೀ. ಗೂ ಹೆಚ್ಚಿನ ರಸ್ತೆಗಳು ಆಗಿವೆ. ಲೋಕೋಪಯೋಗಿ ಇಲಾಖಾ ವ್ಯಾಪ್ತಿಯ ರಸ್ತೆಯ ವ್ಯಾಪ್ತಿ 400 ರಿಂದ 500 ಕಿ.ಮೀ.ಗಳಷ್ಟು ಹೆಚ್ಚಿದೆಯೆಂದು ತಿಳಿಸಿದರು.
ಯಡಿಯೂರಪ್ಪ ಅವರು ಮುಖ್ಯ ಮಂತ್ರಿಗಳಾಗಿದ್ದ ಅವಧಿಯಲ್ಲಿ ಪ್ರತಿ ಕಾಲೋನಿಗಳಿಗೆ ಕಾಂಕ್ರೀಟ್ ರಸ್ತೆ ಯೋಜನೆ ಜಾರಿಗೆ ಬಂದಿದ್ದು, ಇಂದು ಜಿಲ್ಲೆಯ ಗರ್ವಾಲೆ, ಸೂರ್ಲಬ್ಬಿಯಂತಹ ಗ್ರಾಮೀಣ ಭಾಗದ ಗ್ರಾಮಗಳಿಗೂ ಕಾಂಕ್ರಿಟ್ ರಸ್ತೆಯ ಸಂಪರ್ಕ ಪಡೆದುಕೊಂಡಿರುವುದಾಗಿ ತಿಳಿಸಿದ ಅವರು ಪ್ರಸ್ತುತ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 50 ಕೋಟಿ ರೂ. ಅನುದಾನವನ್ನು ವಿನಿಯೋಗಿಸಲಾಗುತ್ತಿದೆಯೆಂದು ಮಾಹಿತಿಯನ್ನಿತ್ತರು.
ಇಷ್ಟೆಲ್ಲ ಅಭಿವೃದ್ಧಿ ಕಾರ್ಯಗಳ ನಡುವೆಯೂ ರಸ್ತೆಗಳ ಬೇಡಿಕೆಯ ಕೂಗು ಇನ್ನೂ ಇರುವ ಬಗ್ಗೆ ಕೇಳಿದ ಪ್ರಶ್ನೆಗೆ, ಕಳೆದ 2018 ರ ಪ್ರಾಕೃತಿಕ ವಿಕೋಪ ಮತ್ತು ಕೊರೋನಾ ಸಾಂಕ್ರಾಮಿಕದ ಹಿನ್ನೆಲೆ ಆ ಅವಧಿಯಲ್ಲಿ ರಸ್ತೆಯಗಳ ಅಭಿವೃದ್ಧಿಗೆ ಹಣದ ಬಿಡುಗಡೆ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೆಲಸಗಳು ವಿಳಂಬವಾಗಿದ್ದವು. ಪ್ರಸ್ತುತ ಎಲ್ಲಾ ರಸ್ತೆ ಅಭಿವೃದ್ಧಿ ಕಾರ್ಯಗಳು ಆರಂಭವಾಗಿದೆ. ಇದರ ನಡುವೆ ಒದೀಗ ಕ್ರಷರ್’ಗಳ ಮುಷ್ಕರ ಒಂದಷ್ಟು ಸಮಸ್ಯೆ ಹುಟ್ಟು ಹಾಕಿದೆಯೆಂದು ತಿಳಿಸಿದರಲ್ಲದೆ, ಕ್ರಷರ್ ಮಾಲಕರು ಮುಷ್ಕರವನ್ನು ಕೈಬಿಡುವಂತೆ ಮನವಿ ಮಾಡಿದರು.
ಬೆಳೆಗಾರರಿಗೆ ನೇರ ಪರಿಹಾರ: ಅತಿವೃಷ್ಟಿ ಹಿನ್ನೆಲೆಯಲ್ಲಿ ಜಿಲ್ಲೆಯ 50 ಸಾವಿರ ಬೆಳೆಗಾರರಿಗೆ 125 ಕೊಟಿ ರೂ. ಪರಿಹಾರ ನೇರವಾಗಿ ಫಲಾನುಭವಿಗಳ ಖಾತೆಗೆ ಹಾಕಲಾಗಿದೆ. ಹಿಂದೊಮ್ಮೆ ರಾಜೀವ್ ಗಾಂಧಿಯವರು, ಡೆಲ್ಲಿಯಿಂದ ಬಿಡುಗಡೆಯಾಗುವ 1 ರೂ. ಅನುದಾನ ಗ್ರಾಮೀಣ ಭಾಗಕ್ಕೆ ಮುಟ್ಟುವಾಗ 20 ಪೈಸೆಯಾಗಿರತ್ತದೆ ಎಂದಿದ್ದರು. ಆದರೆ, ಇಂದು ಒಂದು ಪೈಸೆಯೂ ದುರುಪಯೋಗವಾಗದೆ ಬೆಳೆಗಾರರಿಗೆ ಪರಿಹಾರ ದೊರಕುವಂತಹ ಕಾರ್ಯ ಮೋದಿ ನೇತೃತ್ವದ ಸಕಾರದಿಂದ ನಡೆದಿದೆಯೆಂದು ಮೆಚ್ಚುಗೆಯ ನುಡಿಗಳನ್ನಾಡಿದರು.
ನಾನು ‘ಜನರ ಪ್ರಥಮ ಸೇವಕ: ಜನರ ಪ್ರಥಮ ಸೇವಕ ತಾನೆಂದು ಹೆಮ್ಮೆಯಿಂದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಾಸಕರು, ಮತ ನೀಡಿ ನಮ್ಮನ್ನು ಆಯ್ಕೆ ಮಾಡುವ ಜನರ ನಿರೀಕ್ಷೆಗಳು ಸಾಕಷ್ಟು ಇವೆ. ಅವರ ನಿರೀಕ್ಷೆಗಳಿಗೆ ತಕ್ಕಂತೆ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಕಾರ್ಯಗಳನ್ನು ತನ್ನ ಅಧಿಕಾರದ ಅವಧಿಯಲ್ಲಿ ಮಾಡಿಕೊಂಡು ಬಂದಿದ್ದೇನೆಂದು ನುಡಿದರು.
ಬೇಡವೆಂದವನು ನಾನು: ಮಡಿಕೇರಿ ಜಿಲ್ಲಾಧಿಕಾರಿಗಳ ಭವನದ 8 ಕೋಟಿ ವೆಚ್ಚದ ತಡೆಗೋಡೆಯ ನಿರ್ಮಾಣದ ಸಂದರ್ಭ, ನೂತನ ವಿನ್ಯಾಸದ ತಡೆಗೋಡೆ ಇಲ್ಲಿಯ ವಾತಾವರಣಕ್ಕೆ ಸರಿ ಹೊಂದುವುದಿಲ್ಲವೆಂದು ಪದೇ ಪದೇ ಹೇಳುತ್ತಾ ಬಂದವನು ತಾನೆಂದು ಅಪ್ಪಚ್ಚು ರಂಜನ್ ಸ್ಪಷ್ಟಪಡಿಸಿದರಲ್ಲದೆ, ಇದೀಗ ಬದಲಿ ಕಾಮಗಾರಿ ಹಿಂದಿನ ಮೊತ್ತದಲ್ಲೇ ನಡೆಯಬೇಕೆಂದು ಅಭಿಪ್ರಾಯಿಸಿದರು.
ಗುತ್ತಿಗೆದಾರ ಕಪ್ಪುಪಟ್ಟಿಗೆ: ಕೊಡಗು ಹೆರಿಟೇಜ್ ಸೆಂಟರ್ ನಿರ್ಮಾಣ ಕಾಮಗಾರಿ ಕಳೆದ 13 ವರ್ಷಗಳಿಂದ ಕುಂಟುತ್ತಾ ಸಾಗಿರುವ ವಿಚಾರವನ್ನು ಪ್ರಸ್ತಾಪಿಸಿ, ಈ ಕಾಮಗಾರಿಯ 2.73 ಕೋಟಿ ಮೊತ್ತಕ್ಕೆ ಬಿಲ್ ಆಗಿದ್ದರೂ ಕಾಮಗಾರಿ ಪೂರ್ಣವಾಗದೇ ಇರುವ ಹಿನ್ನೆಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಈ ಕಾಮಗಾರಿಯ ಗುತ್ತಿಗೆದಾರನನ್ನು ‘ಕಪ್ಪು ಪಟ್ಟಿಗೆ’ ಸೇರಿಸಿರುವುದಾಗಿ ಶಾಸಕರು ಸ್ಪಷ್ಟಪಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!