ಹೊಸದಿಗಂತ ವರದಿ,ಹಾವೇರಿ:
ನಾನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ. ಪಕ್ಷವನ್ನು ಒಂದೂಗೂಡಿಸಲು ಮುಂದಾಗುವೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿ ಬಂದಿದೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಾಮಾಜಿಕ ಜಾಲತಾಣದಲ್ಲಿ ನನ್ನ ಹೆಸರು, ನಿಮ್ಮ ಹೆಸರು ಕೇಳಿ ಬರುತ್ತದೆ. ಅದೆಲ್ಲಾ ಏನೂ ಮಹತ್ವ ಅಲ್ಲ, ನಾನೇನು ಆಕಾಂಕ್ಷಿ ಅಲ್ಲ. ಪಕ್ಷ ಸಂಘಟನೆಯಲ್ಲಿ ಎಲ್ಲರಿಗೂ ಶಕ್ತಿಯಿದೆ. ಎಲ್ಲರೂ ಕೂಡಿದಾಗಲೇ ಒಗ್ಗಟ್ಟಿನ ಶಕ್ತಿ ಆಗುತ್ತದೆ. ಒಬ್ಬಂಟಿಯಾಗಿ ಪಕ್ಷ ಕಟ್ಟುವ ಭ್ರಮೆ ನಮ್ಮಲ್ಲಿ ಇಲ್ಲ.
ಎಲ್ಲರೂ ಸೇರಿ ಮಾಡಿದಾಗ ಶಕ್ತಿ ಬರುತ್ತದೆ. ಬಿಜೆಪಿ ಜನಮಾನಸದಲ್ಲಿ ಇರುವ ಪಕ್ಷ. ಅದಕ್ಕಾಗಿ ಒಮ್ಮೊಮ್ಮೆ ಪೈಪೋಟಿ ಇರುತ್ತದೆ. ಇಂತಹ ಸಮಯದಲ್ಲಿ ಸೌಹಾರ್ದತೆಯಿಂದ ಪಕ್ಷದ ಹಿರಿಯರು ಮಾರ್ಗದರ್ಶನ ಮಾಡುತ್ತಾರೆ. ಹಿರಿಯರ ಮಾರ್ಗದರ್ಶನದಲ್ಲಿ ನಾವು ನಡೆಯಬೇಕಾಗುತ್ತದೆ. ಮೇಲಿಂದ ಶಿವರಾಜಸಿಂಗ್ ಚೌಹಾಣ್ ಬರುತ್ತಾರೆ. ಅವರ ಮಾರ್ಗದರ್ಶನದಲ್ಲಿ ಸೌಹಾರ್ದತೆಯಿಂದ ಚುನಾವಣೆ ಆಗುತ್ತದೆ ಎಂದು ಹೇಳಿದರು.
ಬಗೆಹರಿಸಲು ಸೌಹಾರ್ದಯತ ಪ್ರಯತ್ನ
ಮಾಜಿ ಸಚಿವ ಶ್ರೀರಾಮುಲು ಹಾಗೂ ಶಾಸಕ ಜನಾರ್ದನ ರೆಡ್ಡಿ ನಡುವೆ ವಾಕ್ ಸಮರ ನಡೆಯುತ್ತಿದೆ ಎಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇವರಿಬ್ಬರೂ ಪರಸ್ಪರ ಹಳೆಯ, ಆತ್ಮೀಯ ಸ್ನೇಹಿತರು. ಒಮ್ಮೊಮ್ಮೆ ಆತ್ಮೀಯರಲ್ಲೂ ಗ್ಯಾಪ್ ಬರುತ್ತದೆ. ಸ್ನೇಹ ಅಂತಿಮವಾಗಿ ಗೆಲ್ಲುತ್ತದೆ. ಇದೆಲ್ಲಾ ಸರಿಯಾಗುತ್ತದೆ. ಜನಾರ್ದನ ರೆಡ್ಡಿ ಹತ್ತಿರ ಮಾತನಾಡುವೆ. ಪಕ್ಷದ ದೃಷ್ಟಿಯಿಂದ ಇಬ್ಬರ ಹತ್ತಿರ ಸೌಹಾರ್ದ ಭೇಟಿಯಾಗಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುವೆ ಎಂದರು.