ಹೊಸದಿಗಂತ ವರದಿ,ಚಿತ್ರದುರ್ಗ :
ವಾಣಿವಿಲಾಸ ಸಾಗರ ಜಲಾಶಯದ ನಾಲೆಗಳನ್ನು ೧,೨೭೪ ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ ಮಾಡುವ ಯೋಜನೆ ರೂಪಿಸಲಾಗಿದ್ದು, ಶೀಘ್ರವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ವಾಣಿವಿಲಾಸ ಸಾಗರ ಜಲಾಶಯವು ಭರ್ತಿಯಾದ ಹಿನ್ನಲೆಯಲ್ಲಿ ಜಲಾಶಯಕ್ಕೆ ಗುರುವಾರ ಗಂಗಾಪೂಜೆ ಮತ್ತು ಬಾಗಿನ ಸಮರ್ಪಣೆ ನೆರವೇರಿಸಿದ ಅವರು, ನಂತರ ವಿ.ವಿ.ಪುರ ಗ್ರಾಮದ ಶಾಲಾ ಆವರಣದಲ್ಲಿ ಆಯೋಜಿಸಲಾದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜಲಾಶಯ ನಿರ್ಮಾಣ ವೇಳೆ ನಿರ್ಮಿಸಿದ ೧೨೯ ಕಿ.ಮೀ. ಉದ್ದದ ನಾಲೆಗಳು ಇಂದು ಕಿರಿದಾಗಿವೆ. ನಾಲಾ ಆಧುನೀಕರಣ ಕಾಮಗಾರಿಯಿಂದ ನಾಲೆಯ ಕೊನೆ ಭಾಗದ ರೈತರ ಜಮೀನುಗಳಿಗೂ ನೀರು ಲಭಿಸಲಿದೆ. ೨೦೨೨ ರಲ್ಲಿ ಜಲಾಶಯ ಭರ್ತಿಯಾದ ಸಂದರ್ಭದಲ್ಲಿ ಹೊಸದುರ್ಗ ತಾಲ್ಲೂಕಿನ ರೈತರ ಜಮೀನು ಹಿನ್ನೀರಿನಲ್ಲಿ ಮುಳುಗಡೆಯಾಗಿತ್ತು. ಈ ಬಾರಿಯೂ ಜಲಾಶಯ ಭರ್ತಿಯಾಗಿದ್ದು, ಜಲಾಶಯ ಸಂಪೂರ್ಣ ಭರ್ತಿಯಾದ ಸಂದರ್ಭದಲ್ಲಿ ಹಿನ್ನೀರಿನಿಂದ ಜಮೀನು ಮುಳುಗಡೆಯಾಗುವುದನ್ನು ತಡೆಯುವ ಸಲುವಾಗಿ ರೂ.೧೨೦ ಕೋಟಿ ಯೋಜನೆ ತಯಾರು ಮಾಡಲಾಗಿದ್ದು. ಮುಳುಗಡೆ ತಪ್ಪಿಸಲು ಸ್ಟಾಪ್ ಗೇಟ್ ಅಳವಡಿಸಲು ಯೋಜನೆ ರೂಪಿಸಲಾಗಿದೆ ಎಂದರು.
ನಮ್ಮ ಸರ್ಕಾರ ಚುನಾವಣೆ ವೇಳೆ ಕೊಟ್ಟ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿ ಮಾಡಿ, ೫೬ ಸಾವಿರ ಕೋಟಿ ರೂ. ಗಳನ್ನು ಮಧ್ಯವರ್ತಿಗಳಿಲ್ಲದಂತೆ ಎಲ್ಲ ಜಾತಿ, ಧರ್ಮದ ಬಡವರಿಗೆ, ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸುತ್ತಿದ್ದೇವೆ. ರಾಜ್ಯದ ಬಡವರು, ಮಧ್ಯಮ ವರ್ಗದವರು ಸೇರಿ ಎಲ್ಲಾ ಜನ ಸಮುದಾಯಗಳ ನಂಬಿಕೆ ಉಳಿಸಿಕೊಂಡಿದ್ದೇವೆ. ಎಲ್ಲ ಬಡವರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಕಾರ್ಯ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜಲಸಂಪನ್ಮೂಲ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಚಿತ್ರದುರ್ಗ ಜಿಲ್ಲೆಯ ಆರು ವಿಧಾನ ಸಭಾಕ್ಷೇತ್ರಗಳ ಅಭಿವೃದ್ಧಿಗೆ ಮುಂದಿನ ಬಜೆಟ್‌ನಲ್ಲಿ ವಿಶೇಷ ಯೋಜನೆ ರೂಪಿಸಲಾಗಿದೆ. ನೀರಾವರಿ ಇಲಾಖೆಯಿಂದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ೮ ಕೆರೆ ಭರ್ತಿ ಮಾಡಲಾಗುವುದು. ೨೫,೦೦೦ ಕೋಟಿ ರೂ. ವೆಚ್ಚದಲ್ಲಿ ಎತ್ತಿನ ಹೊಳೆ ಜಾರಿ ಮಾಡಿ ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದಾಗಿ ಹೇಳಿದರು.
ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ದಿನ ನನ್ನ ಜೀವನದ ಅವಿಸ್ಮರಣೀಯ ದಿನವಾಗಿದೆ. ಜಿಲ್ಲೆಯ ಜೀವ ನಾಡಿಯಾದ ವಿವಿ ಸಾಗರ ಜಲಾಶಯ ಮಾರಿಕಾಂಬೆಯ ಆಶೀರ್ವಾದಿಂದ ಭರ್ತಿಯಾಗಿದೆ. ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ವೇಗ ನೀಡಿದೆ. ೨೦೨೫ರ ಒಳಗೆ ಜಿಲ್ಲೆಯ ೩೬೦ ಕೆರೆಗಳ ನೀರು ತುಂಬಿಸಲಾಗುವುದು. ಪಿಪಿಪಿ ಮಾದರಿಯಲ್ಲಿ ವಾಣಿ ವಿಲಾಸ ಜಲಾಶಯದ ಸೌಂದರ್ಯೀಕರಣಕ್ಕಾಗಿ ಯೋಜನೆ ರೂಪಿಸಬೇಕು. ಜವನಗೊಂಡನಹಳ್ಳಿ ಹಾಗೂ ಧರ್ಮಪುರ ಹೋಬಳಿಯ ತಲಾ ೧೫ ಕೆರೆಗಳನ್ನು ತುಂಬಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ಟಿ.ರಘುಮೂರ್ತಿ, ಎನ್.ವೈ.ಗೋಪಾಲಕೃಷ್ಣ, ಕೆ.ಸಿ.ವೀರೇಂದ್ರ ಪಪ್ಪಿ, ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ, ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ್‌ಬಾಬು, ವಿ.ವಿ.ಪುರ ಗ್ರಾ.ಪಂ. ಅಧ್ಯಕ್ಷೆ ಟಿ.ಗಂಗಮ್ಮ ಉಮೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಣ್ಣ, ಲಕ್ಕಿಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀದೇವಿ ಮದ್ದಣ್ಣ, ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್, ಭದ್ರಾ ಮೇಲ್ದಂಡೆ ಚಿತ್ರದುರ್ಗ ಯೋಜನಾ ವಲಯದ ಮುಖ್ಯ ಇಂಜಿನಿಯರ್ ಎಫ್.ಹೆಚ್.ಲಮಾಣಿ ಸೇರಿದಂತೆ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು ಹಾಜರಿದ್ದರು.