ನಾನು ಯಾವುದೇ ಜಾತಿಗೆ ಸೀಮಿತವಾಗಿಲ್ಲ: ಎಂಎಲ್‌ಸಿ ವೈ.ಎ.ನಾರಾಯಣಸ್ವಾಮಿ

ಹೊಸದಿಗಂತ ವರದಿ,ಚಿತ್ರದುರ್ಗ :

ಶಿಕ್ಷಕರ ಕ್ಷೇತ್ರದಲ್ಲಿ ಕಳೆದ ೧೮ ವರ್ಷಗಳಿಂದಲೂ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ನಾನು ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಎಲ್ಲರೂ ಶಿಕ್ಷಕರ ಜಾತಿ ಎಂದು ತಿಳಿದುಕೊಂಡಿದ್ದೇನೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನೆರೆದಿದ್ದ ನೂರಾರು ಶಿಕ್ಷಕರುಗಳನ್ನುದ್ದೇಶಿಸಿ ಮಾತನಾಡಿದ ಅವರು, ಏನೇ ಚಿಕ್ಕಪುಟ್ಟ ಭಿನ್ನಾಭಿಪ್ರಾಯಗಳು ಇದ್ದರೂ ಅವುಗಳನ್ನು ಬಿಟ್ಟು ಎಲ್ಲಾ ಶಿಕ್ಷಕರು ಒಂದುಗೂಡಿ ಈ ಬಾರಿಯೂ ನನ್ನನ್ನು ಗೆಲ್ಲಿಸಿ ಆರು ವರ್ಷಗಳ ಕಾಲ ನಿಮ್ಮನ್ನು ತಲೆ ಮೇಲೆ ಹೊತ್ತು ತಿರುಗುತ್ತೇನೆಂದು ಶಿಕ್ಷಕರುಗಳಲ್ಲಿ ಮನವಿ ಮಾಡಿದರು.

ಒಂದು ಬಾರಿ ಗೆದ್ದವರು ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಗೆಲ್ಲುವುದಿಲ್ಲ ಎನ್ನುವ ತಪ್ಪು ಅಭಿಪ್ರಾಯವಿದೆ. ಆದರೆ ನಾನು ಮೂರು ಸಾರಿ ಗೆದ್ದಿದ್ದೇನೆ. ಇದಕ್ಕೆ ಚಿತ್ರದುರ್ಗ, ದಾವಣಗೆರೆ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಕ್ಷಕರುಗಳು ನನ್ನ ಮೇಲಿಟ್ಟಿರುವ ಪ್ರೀತಿ, ವಿಶ್ವಾಸ, ನಂಬಿಕೆಯೆ ಕಾರಣ ಎಂದು ಸಂತಸ ವ್ಯಕ್ತಪಡಿಸಿದರು.

ಐದು ಜಿಲ್ಲೆ, ೩೪ ತಾಲ್ಲೂಕುಗಳಲ್ಲಿ ಸುತ್ತಾಡಿ ಶಿಕ್ಷಕರು, ಉಪನ್ಯಾಸಕರುಗಳ ಸಮಸ್ಯೆಗಳನ್ನು ಆಲಿಸಿದ್ದೇನೆ. ಮುಖ್ಯ ಶಿಕ್ಷಕರುಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆಗೆ ಬಡ್ತಿ ಕೊಡಿಸಿದ್ದೇನೆ. ತಾಲ್ಲೂಕು ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಮತ ಚಲಾವಣೆಗೆ ಎಪಿಕ್ ಕಾರ್ಡ್, ಆಧಾರ್ ಕಾರ್ಡ್, ಫೋಟೋ ಮುಖ್ಯ. ಎಲ್ಲಾ ತಹಶೀಲ್ದಾರ್‌ಗಳಿಗೆ ಮಾರ್ಗಸೂಚಿ ನೀಡುವಂತೆ ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೇನೆ ಎಂದರು.

ಎಲ್ಲೆಲ್ಲಿ ಸಮಸ್ಯೆ ಇದೆಯೋ ನನಗೆ ವಾಟ್ಸ್‌ಪ್ ಕಳಿಸಿ. ಮುಂದಿನ ಫೆಬ್ರವರಿ ಒಳಗೆ ಮುಖ್ಯ ಶಿಕ್ಷಕರು, ಪ್ರಿನ್ಸಿಪಾಲ್ ಹುದ್ದೆಗೆ ಬಡ್ತಿ ಕೊಡಿಸುತ್ತೇನೆ. ಇಪ್ಪತ್ತು ವರ್ಷಗಳಿಂದ ಕುಟುಂಬದ ಜೊತೆ ಕಾಲ ಕಳೆಯುವುದನ್ನು ಬಿಟ್ಟು ನಿಮ್ಮಗಳ ಸೇವೆಗೆ ಮುಡುಪಾಗಿ ನಾಲ್ಕನೆ ಬಾರಿ ಚುನಾವಣೆಗೆ ಸಜ್ಜಾಗಿದ್ದೇನೆ. ಮತ್ತೊಮ್ಮೆ ಗೆಲ್ಲಿಸಿ ನಿಮ್ಮಗಳ ಸೇವೆ ಮಾಡಲು ಅವಕಾಶ ಕೊಡಿ ಎಂದು ಶಿಕ್ಷಕರುಗಳಲ್ಲಿ ವಿನಂತಿಸಿದರು.

ಕ್ಷೇತ್ರದಲ್ಲಿ ನಲವತ್ತು ಪರ್ಸೆಂಟ್ ಹೆಣ್ಣುಮಕ್ಕಳಿದ್ದಾರೆ. ಎಲ್ಲರನ್ನೂ ಗೌರವಿಸಿ ನನ್ನ ಬಳಿ ಬಂದ ಎಲ್ಲರಿಗೂ ಕೆಲಸ ಮಾಡಿಕೊಟ್ಟಿದ್ದೇನೆ. ಕಾಂಗ್ರೆಸ್‌ನಿಂದ ಎಷ್ಟೆ ಬಲಿಷ್ಟ ಅಭ್ಯರ್ಥಿ ಚುನಾವಣೆಗೆ ನಿಂತರೂ ಗೆಲ್ಲಲ್ಲ. ಎಲ್ಲಾ ಸಮಸ್ಯೆಗಳು ಗೊತ್ತಿದೆ. ಅನುದಾನಿತ ಶಾಲೆ ಶಿಕ್ಷಕರುಗಳ ವೇತನ ನಿಲ್ಲಿಸಲು ಬಿಡಲ್ಲ. ಪ್ರತಿ ವರ್ಷ ಬಡ್ತಿ ಕೊಡಿಸುತ್ತೇನೆ. ಯಾರಿಗೂ ಮೋಸ ಮಾಡಿ ಹಣ ಲಪಟಾಯಿಸಿಲ್ಲ. ಇನ್ನೆಂದೂ ಎಂ.ಎಲ್.ಎ. ಚುನಾವಣೆ ತಂಟೆಗೆ ಹೋಗಲ್ಲ ಎಂದು ಶಿಕ್ಷಕರುಗಳಿಗೆ ವಾಗ್ದಾನ ಮಾಡಿದರು.

ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ನಾಗೇಂದ್ರಪ್ಪ, ಜಿಲ್ಲಾ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಕೆಂಚವೀರಪ್ಪ, ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಣ್ಣ, ಸರ್ಕಾರಿ ನೌಕರರ ಸಂಘದ ಸದಸ್ಯ ಶ್ರೀನಿವಾಸ್, ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ವೃಷಬೇಂದ್ರಯ್ಯ, ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಗಳು, ಪ್ರಾಚಾರ್ಯರ ಸಂಘ, ಐ.ಟಿ.ಐ. ಡಿಪ್ಲಮೋ ಕಾಲೇಜಿನ ಸಂಘದ ಪದಾಧಿಕಾರಿಗಳು, ಬಿಜೆಪಿ ವಕ್ತಾರ ನಾಗರಾಜ್ ಬೇದ್ರೆ ಈ ಸಂದರ್ಭದಲ್ಲಿ ಹಾಜರಿದ್ದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!