ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಹುಡುಗಿಯರ ಮೇಲೆ ಲೈಂಗಿಕ ಕಿರುಕುಳ ನೀಡಲಾಗಿತ್ತು. ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಗೃಹಸಚಿವ ಡಾ. ಜಿ. ಪರಮೇಶ್ವರ್ “ಬೆಂಗಳೂರಿನಂತ ಮಹಾನಗರಗಳಲ್ಲಿ ಇಂತಹ ಘಟನೆ ಸಾಮಾನ್ಯ” ಎನ್ನುವ ಅರ್ಥದಲ್ಲಿ ಹೇಳಿಕೆ ನೀಡಿದ್ದರು.
ಈ ಹೇಳಿಕೆಗೆ ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ತಮ್ಮ ಮಾತಿಗೆ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ನನ್ನ ಹೇಳಿಕೆ ತಿರುಚಿ ಹೇಳುವುದು ಸರಿಯಲ್ಲ. ನನ್ನ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ. ನಾನು ಅನೇಕ ಕ್ರಮ ತೆಗದುಕೊಂಡಿದ್ದೇನೆ. ನಮ್ಮ ಮಹಿಳೆಯರು, ತಾಯಂದಿರು, ಸಹೋದರಿಯರ ರಕ್ಷಣೆ ಆಗಬೇಕು ಅಂತ ಇರುವವನು. ಯಾರಿಗೆ ತೊಂದರೆ ಆದರೂ ಕೂಡ ನೇರವಾಗಿ ನಮ್ಮ ಇಲಾಖೆಯಲ್ಲಿ ಇರುವವರನ್ನೇ ಹೊಣೆ ಮಾಡಿದ್ದೇವೆ ಎಂದರು.
ನಾವು ಮಹಿಳೆಯರ ರಕ್ಷಣೆ ಪರವಾಗಿ ಇರುವವರು. ನಾನು ಗೃಹ ಸಚಿವನಾಗಿ ಬಂದ ಮೇಲೆ ನಿರ್ಭಯಾ ಸೇರಿದಂತೆ ಅನೇಕ ಕಾರ್ಯಕ್ರಮ ಮಾಡಿದ್ದೇನೆ. ನಾನು ಅಧಿಕಾರಕ್ಕೆ ಬಂದಾಗ ಆ ನಿಟ್ಟಿನಲ್ಲಿ ಮಹಿಳೆಯರ ಪರ ಅನೇಕ ಕೆಲಸ ಮಾಡಿದ್ದೇನೆ. ನಾಡಿನ ಮಹಿಳೆಯರಿಗೆ ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ.